ಬೀದರ್: ‘ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಕಾಂಗ್ರೆಸ್ ನಿಶ್ಚಿತವಾಗಿಯೂ ಅಧಿಕಾರಕ್ಕೆ ಬರಲಿದೆ. ನಾನೇ ಪಶು ಸಂಗೋಪನೆ ಸಚಿವನಾಗಲಿದ್ದೇನೆ’ ಎಂದು ಶಾಸಕ ರಹೀಂ ಖಾನ್ ಹೇಳಿದರು.
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಮಂಜೂರಾದ ‘ಪಶು ಸಂಜೀವಿನಿ’ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನದ ಫಲವಾಗಿ ಕೆಳ ಸಮುದಾಯದವರು ಸಚಿವರಾಗಲು ಸಾಧ್ಯವಾಗಿದೆ.
ಇಲ್ಲದೇ ಹೋದರೆ ಮೇಲ್ವರ್ಗದವರೇ ಅಧಿಕಾರ ಅನುಭವಿಸುತ್ತಿದ್ದರು. ರಾಜನ ಮಗ ಮಾತ್ರ ರಾಜ, ಮಂತ್ರಿಯ ಮಗ ಮಂತ್ರಿ ಆಗುತ್ತಿದ್ದ. ಆದರೆ, ಈಗ ಜನರು ಬಯಸಿದರೆ ಯಾರು ಬೇಕಾದರೂ ಮಂತ್ರಿಯಾಗಬಹುದು’ ಎಂದರು.
ಇದಕ್ಕೂ ಮೊದಲು ಮಾತನಾಡಿದ ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ‘ಯಡಿಯೂರಪ್ಪ ಸರ್ಕಾರದಲ್ಲಿ ಪಶು ಸಂಗೋಪನೆ ಸಚಿವನಾಗಿದ್ದೆ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಪಶು ಸಂಗೋಪನೆ ಸಚಿವನಾಗಿದ್ದೇನೆ. ಮುಂದಿನ ಸರ್ಕಾರದಲ್ಲೂ ಪಶು ಸಂಗೋಪನೆ ಸಚಿವನಾಗಿಯೇ ಮುಂದುವರಿಯುವೆ’ ಎಂದು ಹೇಳಿದರು.
‘ಪಶು ಸಂಗೋಪನೆ ಇಲಾಖೆಯ ಮೂಲಕ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಗೋಮಾತೆ ಸೇವೆ ಸಲ್ಲಿಸುತ್ತಿರುವ ನಾನು ಪಶು ಸಂಗೋಪನೆ ಸಚಿವನೂ ಆಗಲಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.