ಬೀದರ್: ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಹಾಗೂ ಬಿಜೆಪಿ ಜನ ಸಂಕಲ್ಪ ಯಾತ್ರೆ ಮೂಲಕ ಜನರ ಬಳಿ ಹೋಗಿ ಚುನಾವಣೆ ರಣ ಕಹಳೆ ಮೊಳಗಿಸಿವೆ. ಇದೀಗ ಕಾಂಗ್ರೆಸ್ ಫೆ.3ರಿಂದ ಬಸವಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆಗೆ ಸಜ್ಜಾಗಿದೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಜಮೀರ್ ಅಹಮ್ಮದ್ ಖಾನ್, ಭೈರತಿ ಸುರೇಶ, ಎಚ್. ಸಿ.ಮಹದೇವಪ್ಪ, ಸಂತೋಷ ಲಾಡ್, ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಸೇರಿ 35 ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಬಸವಕಲ್ಯಾಣ, ಭಾಲ್ಕಿ, ಔರಾದ್, ಬೀದರ್, ಬೀದರ್ ದಕ್ಷಿಣ ಹಾಗೂ ಹುಮನಾಬಾದ್ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ.
ಕಾಂಗ್ರೆಸ್ ನಾಯಕರ ದಂಡೇ ಜಿಲ್ಲೆಗೆ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಮಿಂಚಿನ ಹುಮ್ಮುಸು ಮೂಡಿಸಿದೆ. ಕಳಾಹೀನಗೊಂಡಿದ್ದ ಘಟಕಗಳು ಸಹ ಒಂದು ವಾರದಿಂದ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಯುವ ಘಟಕಗಳು ಸಕ್ರೀಯವಾಗಿವೆ.
ಸಿದ್ದರಾಮಯ್ಯ ಅವರು ಬಸವಕಲ್ಯಾಣದಿಂದ ಯಾತ್ರೆ ಆರಂಭಿಸಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಯಾತ್ರೆ ನಡೆಸಲಿದ್ದಾರೆ. ಕಾಂಗ್ರೆಸ್ ನಾಯಕರ ತಂಡ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪ್ರಜಾಧ್ವನಿ ಯಾತ್ರೆಯ ಮೂಲಕ ಜನರಿಗೆ ತಿಳಿಸಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಯೋಜನೆಗಳ ಬಗ್ಗೆಯೂ ಭರವಸೆ ನೀಡಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ತಿಳಿಸಿದ್ದಾರೆ.
ಮುಖಂಡರನ್ನು ಮೆಚ್ಚಿಸಲು ಆಕಾಂಕ್ಷಿಗಳ ಶಕ್ತಿ ಪ್ರದರ್ಶನ
ಕಾಂಗ್ರೆಸ್ ಮುಖಂಡರನ್ನು ಮೆಚ್ಚಿಸಲು ಟಿಕೆಟ್ ಆಕಾಂಕ್ಷಿಗಳು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಔರಾದ್ ಹಾಗೂ ಬೀದರ್‌ನಲ್ಲಿ ನಾಯಕರಿಗೆ ಸ್ವಾಗತ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಕೆಲವರು ಅಪಾರ ಸಂಖ್ಯೆಯ ಬೆಂಬಲಿಗರನ್ನು ಸಮಾರಂಭಕ್ಕೆ ಕರೆ ತಂದು ಶಕ್ತಿ ಪ್ರದರ್ಶನ ಮಾಡುವ ಮಟ್ಟಿಗೆ ತಯಾರಿ ಮಾಡಿಕೊಂಡಿದ್ದಾರೆ. ಪ್ರತಿಯೊಂದು ಕೇತ್ರದಲ್ಲಿ ಕನಿಷ್ಠ 20 ಸಾವಿರದಿಂದ 40 ಸಾವಿರ ಜನರನ್ನು ಸೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ಯುಟ್ಯೂಬ್‌ಗಳಲ್ಲಿ ಸ್ವಾಗತ ಕೋರುವ ಸಂದೇಶ, ವಿಡಿಯೊ ದೃಶ್ಯಾವಳಿಗಳನ್ನು ಹರಿಯ ಬಿಡಲಾಗಿದೆ.
ಜಿಲ್ಲೆಯ ಮೂವರು ಹಾಲಿ ಶಾಸಕರು ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೆಲ ನಾಯಕರು ಜಾತಿ ಜನಸಂಖ್ಯೆಯ ಲೆಕ್ಕಾಚಾರ ತೋರಿಸಿ ಮುಖಂಡರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಔರಾದ್ ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟರ ಹಾಗೂ ಹಿಂದುಳಿದ ಸಮುದಾಯಗಳ ಸಂಖ್ಯೆ ಹೆಚ್ಚಿರುವ ಕಾರಣ ಅವರ ನೇತೃತ್ವದ ಮತದಾರರ ಮೇಲೆ ಪರಿಣಾಮ ಬೀರಲಿದೆ.
ಏನೇ ಆದರೂ ಪ್ರಜಾಧ್ವನಿಯಾತ್ರೆ ಜಿಲ್ಲೆಯಿಂದ ಹೋದ ನಂತರವೇ ಮೊದಲ ಹಂತದ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.