ಖಟಕಚಿಂಚೋಳಿ: ನೆಲವಾಡ ಗ್ರಾಮದ ರೈತ ರಾಜಕುಮಾರ ತೊಗರೆ ತಮ್ಮ ಒಂದು ಎಕರೆಯಲ್ಲಿ ಸೌತೆಕಾಯಿ ಬೆಳೆದು ಯಶಸ್ಸು ಕಂಡಿದ್ದಾರೆ.
ಸದ್ಯ ಬೇಸಿಗೆ ಪ್ರಾರಂಭವಾಗಿದ್ದು, ತಂಪು ಪಾನೀಯ ಹಾಗೂ ಸೌತೆಕಾಯಿ ಬೇಡಿಕೆ ಹೆಚ್ಚಿದೆ. ‘ಸೌತೆಕಾಯಿ ಬೆಳೆಯಲು ಡಿಸೆಂಬರ್ ತಿಂಗಳಲ್ಲಿ ಭೂಮಿ ಹದ ಮಾಡಿ 5 ಅಡಿ ಅಂತರದಲ್ಲಿ ಸಾಲುಗಳನ್ನು ಬಿಡಲಾಗಿದೆ.
ಸಾಲುಗಳ ಮೇಲ್ಭಾಗದಲ್ಲಿ ಮಲ್ಚಿಂಗ್ ಪೇಪರ್ ಹಾಸಿ ಸಸಿಯಿಂದ ಸಸಿಗೆ ಒಂದೂವರೆ ಅಡಿ ಅಂತರದಲ್ಲಿ ಸೌತೆ ಬೀಜ ನಾಟಿ ಮಾಡಿದ್ದಾರೆ. ಅಲ್ಲದೇ ಹನಿ ನೀರಾವರಿ ಮೂಲಕ ನೀರು ಬಿಟ್ಟಿದ್ದೇನೆ’ ಎನ್ನುತ್ತಾರೆ ರೈತ ರಾಜಕುಮಾರ.
ಸೌತೆಕಾಯಿ ಎರಡು ತಿಂಗಳಲ್ಲಿ ಕಟಾವಿಗೆ ಬಂದಿದೆ. ಸೌತೆ ಬೆಳೆಯಲು ₹ 30 ಸಾವಿರ ಖರ್ಚಾಗಿದೆ. ಸದ್ಯ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಸೌತೆಕಾಯಿ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರತಿದಿನ ಅಂದಾಜು 80 ಕೆಜಿ ಕಟಾವಿಗೆ ಬರುತ್ತಿದೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹ 30 ರಿಂದ ₹ 40ಕ್ಕೆ ಮಾರಾಟವಾಗುತ್ತಿದೆ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಲಭಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಸೌತೆಕಾಯಿ ಬೆಳೆ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುತ್ತದೆ. ಆದರೆ ಅದಕ್ಕೆ ತಕ್ಕಂತೆ ಪ್ರತಿದಿನ ಪರಿಶ್ರಮ ಪಡಬೇಕು. ಔಷಧ ಸಿಂಪಡಣೆ, ರಾಸಾಯನಿಕ ಗೊಬ್ಬರ, ಕಳೆ ತೆಗೆಯುವುದು ಸಮಯಕ್ಕೆ ಸರಿಯಾಗಿ ಮಾಡಿದರೆ ನಾಲ್ಕು ತಿಂಗಳವರೆಗೆ ಇಳುವರಿ ಪಡೆಯಬಹುದು ಎಂದು ತಮ್ಮ ಅನುಭವ ಹಂಚಿಕೊಂಡರು.
ನಾನು ಸೌತೆಕಾಯಿಯನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವುದಿಲ್ಲ. ಬದಲಾಗಿ ಸ್ವತಃ ನಾನೇ ಭಾಲ್ಕಿ, ಹಳ್ಳಿಖೇಡ, ಹುಮನಾಬಾದ್ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತೇನೆ. ನನ್ನ ಸಮಕ್ಷಮದಲ್ಲಿ ಎಲ್ಲವೂ ನಡೆಯುತ್ತದೆ. ಇದರಿಂದ ತೂಕ, ಬೆಲೆಯಲ್ಲಿ ಯಾವುದೇ ರೀತಿಯ ಏರುಪೇರಾಗುವುದಿಲ್ಲ ಎನ್ನುತ್ತಾರೆ.
ಕೇವಲ ಪಿಯುಸಿ ಓದಿದರೂ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಬೇಕೆನ್ನುವ ಮಹದಾಸೆ ಇವರದ್ದಾಗಿದೆ. ಸದ್ಯ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ವಾತಾವರಣಕ್ಕೆ ಅನುಗುಣವಾಗಿ ಬೆಳೆ ಬೆಳೆದು ಯಶಸ್ಸು ಕಾಣುತ್ತಿದ್ದಾರೆ. ಅಲ್ಲದೇ ಈ ರೈತ ನಿರಂತರವಾಗಿ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುತ್ತಾರೆ ಹಿರಿಯರಾದ ಅರುಣ ಹಜ್ಜರಗೆ ತಿಳಿಸುತ್ತಾರೆ.