ಬೀದರ್,ಮಾ.15: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ.ಪಾಟೀಲ ಮುನೇನಕೊಪ್ಪ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಉದ್ದಗಲಕ್ಕೂ ಸರ್ಕಾರದಿಂದ ಈ ಸಮ್ಮೇಳನವನ್ನು ಆಯೋಜನೆ ಮಾಡಲಾಗುತ್ತಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳ ಅಕೌಂಟಗೆ ಹಣ ಜಮೆ ಮಾಡುವ ಕೆಲಸವನ್ನು ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ದೇಶದಲ್ಲಿ ಹೊಸ ಬದಲಾವಣೆ ತರುವ ಪ್ರಯತ್ನ ಇದಾಗಿದೆ, ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ಅವರ ಅಕೌಂಟಗೆ ಹಾಕುವ ಕೆಲಸ ನಮ್ಮ ರಾಜ್ಯದ ಅನೇಕ ಹಿರಿಯ ಮಂತ್ರಿಗಳು ಮಾಡುತ್ತಿದ್ದು ಇದರಿಂದ ಮಧ್ಯವರ್ತಿಗಳ ಹಾವಳಿ ತಡೆದಂತಾಗುತ್ತದೆ ಎಂದು ಹೇಳಿದರು.
ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಅವರು ಮಾತನಾಡಿ, ದೇಶದಲ್ಲಿ 81 ಕೋಟಿ ಜನರು ಡಬಲ್ ಇಂಜಿನ್ ಸರ್ಕಾರದ ಒಂದಿಲ್ಲ ಒಂದು ಲಾಭ ಪಡೆದವರಾಗಿದ್ದಾರೆ, ಸನ್ಮಾನ್ಯ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದ ನಂತರ ಬಡವರಿಗೆ ಸರ್ಕಾರದ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪುವಂತೆ ಮಾಡುತ್ತಿದ್ದಾರೆ, ದೀನರು, ದಲಿತರು, ಹಿಂದುಳಿದವರು, ಕೃಷಿಕರಿಗೆ ಸರ್ಕಾರದ ಹತ್ತಾರು ಯೋಜನೆಗಳನ್ನು ನೀಡಲಾಗುತ್ತಿದೆ.
ಪ್ರತಿಯೊಂದು ಬಡ ಹೆಣ್ಣು ಮಕ್ಕಳಿಗೆ ಉಚಿತ ಗ್ಯಾಸ್ ಸಿಲಿಂಡರ ಕೊಟ್ಟಿದೆ ಮತ್ತು 13 ಕೋಟಿ ಶೌಚಾಲಯಗಳನ್ನು ಬಡ ಹೆಣ್ಣು ಮಕ್ಕಳ ಮನೆಯಲ್ಲಿ ಕಟ್ಟಿಸಲಾಗಿದೆ. 3.5 ಕೋಟಿ ವಸತಿಗಳನ್ನು ನಮ್ಮ ಸರ್ಕಾರ ನೀಡಿದೆ, 18 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ಆಯುಷ್ಮಾನ ಭಾರತ ಆರೋಗ್ಯ ಕಾರ್ಡದಿಂದ 5 ಲಕ್ಷ ರೂ.ವರೆಗೆ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ, ಗರ್ಭಿಣಿ ಮಹಿಳೆಯರಿಗೆ 5 ಸಾವಿರ ರೂ. ನೀಡಲಾಗುತ್ತಿದೆ. ಪ್ರಧಾನಮಂತ್ರಿ ಜನ ಧನ್ ಯೋಜನೆಯ ಮುಖಾಂತರ ದೇಶದ 70 ಕೋಟಿ ಬಡ ಹೆಣ್ಣು ಮಕ್ಕಳ ತಮ್ಮ ಖಾತೆಯನ್ನು ಉಚಿತವಾಗಿ ಬ್ಯಾಂಕಿನಲ್ಲಿ ತೆರೆಯುವಂತೆ ಮಾಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಉಚಿತವಾಗಿ ವ್ಯಾಕ್ಸಿನ್ ನೀಡಲಾಗಿದೆ, ಕೃಷಿ ಸಮ್ಮಾನ್ ಯೋಜನೆಯಿಂದ 11.5 ಕೋಟಿ ರೈತರು ಲಾಭ ಪಡೆದಿದ್ದಾರೆ. ಯೂರಿಯಾ ಡಿ.ಎ.ಪಿ.ಗೊಬ್ಬರದ ಮೇಲು ಭಾರತ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದೆ ಎಂದು ಹೇಳಿದರು.
ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ್ ಮಾತನಾಡಿ, ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು, ಕರ್ನಾಟಕದ 6 ಕೋಟಿ ಜನರ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಸಮ್ಮೇಳನ ನಡೆಯುತ್ತಿದೆ, ಸನ್ಮಾನ್ಯ ಮುಖ್ಯಮಂತ್ರಿಗಳು ನಮ್ಮ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ ಹಣವನ್ನು ನೀಡಿದ್ದಾರೆ. ಮಕ್ಕಳಿಗೆ ಲಾಭವಾಗಬೇಕೆನ್ನುವ ಉದ್ದೇಶದಿಂದ ಸರ್ಕಾರ ಪರಿಶಿಷ್ಟ ಜಾತಿಯ 15 ಪ್ರತಿಶತ ಇರುವ ಮೀಸಲಾತಿಯನ್ನು 17 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ ಮತ್ತು ಪರಿಶಿಷ್ಟ ಪಂಗಡದ ಶೇ. 3 ಪ್ರತಿಶತ ಇರುವ ಮೀಸಲಾತಿಯನ್ನು ಶೇ.7 ಪ್ರತಿಶತಕ್ಕೆ ಹೆಚ್ಚಿಸಿದೆ ಎಂದರು.
ತಮ್ಮ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಯಾದರೆ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಬೇಕು ತಕ್ಷಣ ಅಂಬುಲೆನ್ಸ್ ಮತ್ತು ಡಾಕ್ಟರ್ ನಿಮ್ಮ ಮನೆಗೆ ಬಂದು ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರತಿ ಜಿಲ್ಲೆಗೊಂದು ಗೋ ಶಾಲೆ, ಕುರಿಗಾಗಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ನಮ್ಮ ಇಲಾಖೆಯಲ್ಲಿ ಜಾರಿಗೆ ತರಲಾಗಿದೆ. ಬಸವಕಲ್ಯಾಣದಲ್ಲಿ 6 ಕೋಟಿ ವೆಚ್ಚದಲ್ಲಿ ಅನುಭವ ಮಂಟಪದ ಕೆಲಸ ನಡೆಯುತ್ತಿದ್ದು ಇದು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಬೇಕು ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರು ಮಾತನಾಡಿ, ಸಮಾಜದ ಕಟ್ಟ ಕಡೆಯ ಮನುಷ್ಯನು ಸ್ವಾವಲಂಭಿಯಾಗಿ ಬದುಕಬೇಕೆನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಅದನ್ನು ಅನುಷ್ಠಾನ ಮಾಡಿಕೊಂಡು ಬರುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಶ್ರೀಮಂತರ ರಾಷ್ಟ್ರದಲ್ಲಿ ನೆಮ್ಮದಿ ಇರಲಿಲ್ಲ ಕೋವಿಡ್ ಹೊಡೆತಕ್ಕೆ ಸಿಕ್ಕು ಅನೇಕ ರಾಷ್ಟçಗಳು ಹಲವಾರು ಸಾವು ನೋವುಗಳನ್ನು ಅನುಭವಿಸಿದರು. ಅನೇಕ ರಾಷ್ಟ್ರಗಳು ಕೋವಿಡ್ ಬಂದ ಸಂದರ್ಭದಲ್ಲಿ ಭಾರತ ದೊಡ್ಡ ದೇಶ ಇಲ್ಲಿ ಹೆಣಗಳ ರಾಶಿ ನೋಡಬಹುದೆಂದು ಹೇಳಿದ್ದರು. ಆದರೆ ನಮ್ಮ ಪ್ರಧಾನಿ ಅವರು ವಿಜ್ಞಾನಿಗಳಿಗೆ ಬೆನ್ನು ತಟ್ಟಿ ಲಸಿಕೆ ಕಂಡುಹಿಡಿದು ಜನರಿಗೆ ಉಚಿತವಾಗಿ ಲಸಿಕೆ ನೀಡುವುದರ ಜೊತೆಗೆ 50 ರಿಂದ 60 ರಾಷ್ಟ್ರಗಳಿಗೆ ಕೋವಿಡ್ ಲಸಿಕೆಯನ್ನು ನಾವು ನೀಡುವಂತಾಯಿತು ಎಂದು ಹೇಳಿದರು.
ನಮ್ಮ ಇಲಾಖೆಯಲ್ಲಿ ಆರು ತಿಂಗಳ ಮಗುವಿನಿಂದ ಹಿಡಿದು ಆರು ವರ್ಷದ ಮಕ್ಕಳವರೆಗೂ ಯೋಜನೆಗಳನ್ನು ನೀಡಿದ್ದೇವೆ.
45 ಸಾವಿರ ಸ್ವಸಹಾಯ ಗುಂಪುಗಳಿಗೆ ಸೊನ್ನೆ ಪ್ರತಿಶತದಲ್ಲಿ ಸಾಲ ಸೌಲಭ್ಯ ನೀಡಲಾಗಿದೆ. ದುಡಿಯುವ ಮಹಿಳೆಯರಿಗೆ 350 ಕೋಟಿ ಹಣವನ್ನು ಮೀಸಲಿಟ್ಟು ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದೆ. ಯಶಸ್ವಿನಿ ಕಾರ್ಡ ಯೋಜನೆಯಿಂದ ಸರ್ಕಾರಿ ನೌಕರ ಮತ್ತು ಅವರ ಕುಟುಂಬ ಅವಲಂಬಿತರಿಗೆ ಭದ್ರತೆಯನ್ನು ನಮ್ಮ ಸರ್ಕಾರ ಒದಗಿಸಿ ಕೊಟ್ಟಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಒಂದು ವರ್ಷದಲ್ಲಿ ಎರಡು ಬಾರಿ ಗೌರವ ಧನವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಬೀದರ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೆನೆ. ಬೆಂಗಳೂರು ಶಾಲಾ ಕಾಲೇಜುಗಳು ಮತ್ತು ಅಲ್ಲಿಯ ತರಹ ಕೆಲಸವನ್ನು ಈ ಭಾಗದಲ್ಲಿ ಸಿಗಬೇಕು. ಹಿಂದೆ ನಾನು 20 ತಿಂಗಳು ಕೃಷಿ ಸಚಿವನಾಗಿ, 14 ತಿಂಗಳು ಸಹಕಾರ ಸಚಿವನಾಗಿ ಕೆಲಸ ಮಾಡಿದ ಅವಧಿಯಲ್ಲಿ ನಾನು ಹಲವಾರು ಅಭಿವೃದ್ಧಿಗಳನ್ನು ಮಾಡಿದ್ದೇನೆಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಿಂದ ಸರ್ಕಾರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ಈ ಸಮ್ಮೇಳದನದಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಯದಲಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಸಪ್ನಾ ಸಂಜು ಕುಮಾರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಂ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸರ್ಕಾರದ ಲಾಭ ಪಡೆದ ಫಲಾನುಭವಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.