ಬೀದರ್: ‘ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರೇ ಸರಿ ಇಲ್ಲ. ನನಗಿಂತ ಕಿರಿಯರಾದ ರಮೇಶ ಪಾಟೀಲ ಸೋಲಪುರಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡಿ ನಮ್ಮನ್ನು ನಿರ್ಲಕ್ಷಿಸಿದ್ದಕ್ಕಾಗಿ ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ’ ಎಂದು ಮುಖಂಡರಾದ ಅಶೋಕುಮಾರ ಕರಂಜಿ ಹಾಗೂ ಅಶೋಕ ಪಾಟೀಲ ಸಂಗೋಳಗಿ ತಿಳಿಸಿದರು.
ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ಕಳಿಸಿದ್ದೇನೆ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
‘ರಮೇಶ ಪಾಟೀಲ ಸೋಲಪುರ ಜೆಡಿಎಸ್‌ನ ಡಮ್ಮಿ ಅಭ್ಯರ್ಥಿಯಾಗಿದ್ದಾರೆ. ಹಿಂದೆ ನನ್ನ ಪತ್ನಿ ತಾಲ್ಲೂಕು ಪಂಚಾಯಿತಿ ಸ್ಪರ್ಧಿಸಿದ್ದಾಗ ಮುಖಂಡರು ಪ್ರಚಾರಕ್ಕೂ ಬರಲಿಲ್ಲ. ಹೀಗಾಗಿ ಸೋಲನುಭವಿಸಬೇಕಾಯಿತು. ಮುಖಂಡರಿಗೆ ಪಕ್ಷ ಸಂಘಟನೆ ಬಗ್ಗೆ ಕಾಳಜಿ ಇಲ್ಲ’ ಎಂದು ಕರಂಜಿ ತಿಳಿಸಿದರು.
‘ಎಂ.ಜಿ. ಮುಳೆ, ಪ್ರಕಾಶ ಖಂಡ್ರೆ, ಎಂ.ಎಸ್. ಖೂಬಾ, ಪಿ.ಜಿ.ಆರ್. ಸಿಂಧಿಯಾ ಸೇರಿದಂತೆ ಅನೇಕರು ಪಕ್ಷ ತೊರೆದು ಹೋಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಈಚೆಗೆ ಬೀದರ್‌ಗೆ ಬಂದಿದ್ದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಸಹ ನನಗೆ ಅವಕಾಶ ಕೊಡಲಿಲ್ಲ. ಯಾವುದೋ ಒಂದು ಪ್ರಾಣಿ ಚರ್ಮ ಇದೆ ಎಂದು ನನ್ನ ಮನೆಯ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು. ಬಿಜೆಪಿ ಮುಖಂಡರು ಬಿಟ್ಟರೆ ಜೆಡಿಎಸ್‌ನ ಒಬ್ಬ ಮುಖಂಡರು ನನಗೆ ಸಾಂತ್ವನ ಹೇಳಲಿಲ್ಲ. ಹೀಗಾಗಿ ಬಿಜೆಪಿ ಸೇರುತ್ತಿದ್ದೇನೆ’ ಎಂದು ಅಶೋಕ ಪಾಟೀಲ ಹೇಳಿದರು.