News Kannada
Wednesday, October 04 2023
ಬೀದರ್

ಜೆಡಿಎಸ್ , ಕಾಂಗ್ರೆಸ್ ಒಂದೇ ಕೈಚೀಲದ ಎರಡು ಹಿಡಿಕೆಗಳು- ಕೇಂದ್ರ ಗೃಹ ಸಚಿವ ಅಮಿತ್ ಶಾ

JD(S), Congress are two handles of the same handbag: Union Home Minister Amit Shah
Photo Credit : News Kannada

ಬೀದರ್‌: ‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಒಂದೇ ಕೈಚೀಲದ ಎರಡು ಹಿಡಿಕೆಗಳು. ಇವುಗಳಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲಾಗದು. ರಾಜ್ಯದ ಅಭಿವೃದ್ಧಿಗಾಗಿ ಪೂರ್ಣ ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.

ಜಿಲ್ಲೆಯ ಹುಲಸೂರು ತಾಲ್ಲೂಕಿನ ಗೋರಟಾ(ಬಿ) ಗ್ರಾಮದ ಹೊರ ವಲಯದಲ್ಲಿ ಹುತಾತ್ಮರ ಸ್ಮಾರಕ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಅನಾವರಣಗೊಳಿಸಿ ಅವರು ಪೂರ್ತಿ ರಾಜಕೀಯ ಮಾತನಾಡಿದರು.

‘ಹಿಂದಿನ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲಾಗಲಿಲ್ಲ. 104 ಸ್ಥಾನಗಳನ್ನು ಗೆದ್ದರೂ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿಲ್ಲ. ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್‌ನವರು ಕಾಂಗ್ರೆಸ್‌ನ ಕುಂಕುಳಲ್ಲಿ ಕುಳಿತು ಸರ್ಕಾರ ರಚಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಕೂಡ ಆದರು. ರಾಜ್ಯದಲ್ಲಿ ಅಂತಹ ಅತಂತ್ರ ಸ್ಥಿತಿಯನ್ನು ನಿರ್ಮಾಣ ಮಾಡಬಾರದು’ ಎಂದು ಮತದಾರರಲ್ಲಿ ಕೋರಿದರು.

‘ಕರ್ನಾಟಕವು ಕಾಂಗ್ರೆಸ್‌ನ ಭ್ರಷ್ಟಾಚಾರದ ಕೇಂದ್ರವಾಗಬಾರದು. ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಆಗುವುದನ್ನು ತಪ್ಪಿಸಬೇಕು. ಕಾಂಗ್ರೆಸ್‌ನಿಂದ ರಾಜ್ಯದ ಕಲ್ಯಾಣ ಸಾಧ್ಯವಿಲ್ಲ’ ಎಂದು ಹೇಳುತ್ತ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಸವೇಶ್ವರ, ಗುರುನಾನಕ್ ನಡೆದಾಡಿದ ಹಾಗೂ ನರಸಿಂಹ ಝರಣಿ ಇರುವ ಪುಣ್ಯಭೂಮಿಗೆ ನನ್ನ ನಮನ. ಗುಲಾಮಿ ಸಂತತಿಯನ್ನು ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದರು. ಯಡಿಯೂರಪ್ಪ ₹ 3 ಸಾವಿರ ಕೋಟಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹ 5 ಸಾವಿರ ಕೋಟಿ ಕಲ್ಯಾಣ ಕರ್ನಾಟಕಕ್ಕೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿ ಸರ್ಕಾರ ರಾಮಮಂದಿರ ಹಾಗೂ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸಿದೆ. ಕಳಸಾ ಬಂಡೂರಿ ಯೋಜನೆಯ ಸಮಸ್ಯೆಯನ್ನು ನಿವಾರಿಸಿದೆ. ಬೀದರ್‌, ಕಲಬುರಗಿ ಬಳ್ಳಾರಿ ವರೆಗಿನ 411 ಕಿ.ಮೀ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ₹ 5 ಕೋಟಿ ವೆಚ್ಚದಲ್ಲಿ ಬೀದರ್‌ ವಿಶ್ವವಿದ್ಯಾಲಯ ಅಭಿವೃದ್ಧಿಗೊಳ್ಳಲಿದೆ. ಈಗಾಗಲೇ ಸಿಪಿಟ್‌ ಕಾರ್ಯ ನಡೆಯುತ್ತಿದೆ. ರಾಜ್ಯದ 54 ಲಕ್ಷ ರೈತರ ಖಾತೆಗೆ ನೇರವಾಗಿ ₹ 10 ಹಣ ಜಮಾ ಮಾಡುವ ಕೆಲಸವನ್ನು ಮಾಡಿದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರ ಬಡವರಿಗೆ ಮನೆ, ಶೌಚಾಲಯ, ಅಡುಗೆ ಅನಿಲ, ವಿದ್ಯುತ್, 5 ಕೆ.ಜಿ. ಧಾನ್ಯ ಹಾಗೂ ₹ 5 ಲಕ್ಷ ವರೆಗಿನ ವೈದ್ಯಕೀಯ ಚಿಕಿತ್ಸೆ ಸೌಲಭ್ಯವನ್ನು ಉಚಿತವಾಗಿ ಕೊಟ್ಟಿದೆ’ ಎಂದು ಬಿಜೆಪಿ ಕೈಗೊಂಡ ಕಾರ್ಯಗಳನ್ನು ವಿವರಿಸಿದರು.

‘ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೆ, ಕಾಂಗ್ರೆಸ್‌ ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಲ್ಪಸಂಖ್ಯಾತರಿಗೆ ನೀಡಿದ್ದ ಮೀಸಲಾತಿಯನ್ನು ಕಡಿತಗೊಳಿಸಿ ಶೇಕಡ 2 ರಷ್ಟು ಮೀಸಲಾತಿಯನ್ನು ವೀರಶೈವ ಲಿಂಗಾಯತರಿಗೆ ಕೊಟ್ಟಿದ್ದಾರೆ. ಪರಿಶಿಷ್ಟರ ಪಟ್ಟಿಯಲ್ಲಿರುವ ಸಮುದಾಯಗಳಿಗೂ ಒಳ ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಿದ್ದಾರೆ’ ಎಂದು ಬಣ್ಣಿಸಿದರು.

See also  ಉಳ್ಳಾಲ: ಡಿವೈಡರ್ ಗುದ್ದಿದ ಬೈಕ್, ಸವಾರ ಗಂಭೀರ ಗಾಯ

‘ಎಂಟು ವರ್ಷಗಳ ಹಿಂದೆ ಹುತಾತ್ಮರ ಸ್ಮಾರಕಕ್ಕೆ ನಾನೇ ಶಿಲಾನ್ಯಾಸ ನೆರವೇರಿಸಿದ್ದೆ. ಇಂದು ಹುತಾತ್ಮರ ಸ್ಮಾರಕವನ್ನು ಉದ್ಘಾಟಿಸಿದ್ದೇನೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ₹50 ಕೋಟಿ ವೆಚ್ಚದಲ್ಲಿ ಸ್ಮಾರಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ. ಅದರ ಉದ್ಘಾಟನೆಗೆ ಒಂದೂವರೆ ವರ್ಷಗಳ ನಂತರ ಮತ್ತೆ ಇಲ್ಲಿಗೆ ಬರಲಿದ್ದೇನೆ’ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಕಲಬುರಗಿ ಸಂಸದ ಉಮೇಶ ಜಾಧವ, ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ, ಶಾಸಕ ಶರಣು ಸಲಗರ, ವಿಧಾನ ಪರಿಷತ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಶಿಲ್‌ ನಮೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಕಲಬುರಗಿ ವಿಭಾಗೀಯ ಪ್ರಮುಖ ಈಶ್ವರಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ, ತೆಲಂಗಾಣದ ಬಂಡಿ ಸಂಜಯಕುಮಾರ, ತೆಲಂಗಾಣ ಬಿಜೆಪಿ ಅಧ್ಯಕ್ಷ ಇಟೆಲಾ ರಾಜೇಂದ್ರ, ಮಹೇಶ ತೆಂಗನಕಾಯಿ ಇದ್ದರು. ತುಳಸಿ ಮುನಿರಾಜ್ ಗೌಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು