ಔರಾದ: ಚುನಾವಣೆಗಿಂತ 6 ತಿಂಗಳು ಮೊದಲೇ ನೀತಿ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಸಮಾಜ ಸೇವಕ ಗುರುನಾಥ ವಡೆಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಬೀದರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮೇ ತಿಂಗಳಲ್ಲಿ ನಡೆಯಬೇಕಾಗಿದೆ. ಆದರೆ ಕಳೆದ 5-6 ತಿಂಗಳಿಂದ ಕರ್ನಾಟಕದಲ್ಲಿ ಮತದಾರರಿಗೆ ಸೀರೆ ಹಂಚುವುದು, ಕುಕ್ಕರ್ ಹಂಚುವುದು, ಹಣ ಹಂಚುವುದು ನಡೆಯುತ್ತಿದೆ. ಇದಲ್ಲದೇ ಮತದಾರರಿಗೆ ಸೈಟ್ ಕೊಡುವ ಆಮಿಷ್ ಕೂಡ ನೀಡಲಾಗುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲೂ ವೇದಿಕೆಯಿಂದ ತಮಗೆ ಬೆಂಬಲಿಸುವಂತೆ ಕೋರುತ್ತಿರುವ ಪ್ರಸ೦ಗಗಳು ನೋಡಿ, ಸಾಹಿತ್ಯ ಪರಿಷತ್ತಿನ ಸಮ್ಮೇಳನ ಕೂಡ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲನಿಂದಲೇ ಅನೇಕ ಕಡೆ ಹಣ, ಬಂಗಾರ, ಸೀರೆಗಳು, ವಸ್ತುಗಳು ಪೋಲಿಸರಿಂದ ವಶಪಡಿಸಿಕೊಂಡಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ರೀತಿಯಾಗಿ ಒಟ್ಟಿನಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲನೇ ಮತದಾರರಿಗೆ ನಾನಾ ಪ್ರಕಾರದ ಉಚಿತ ವಸ್ತುಗಳು, ಸೈಟ್‌ಗಳು ಹಾಗೂ ಹಣವನ್ನು ಕೊಡುವ ಆಮಿಷ್ಯ ನೀಡಲಾಗುತ್ತಿದೆ. ಇದರಿ೦ದ ಪ್ರಜಾಪ್ರಭುತ್ವದ ಪಾವಿತ್ರ್ಯ ಹಾಳಾಗುತ್ತಿದೆ. ಜನರು ನಿಸ್ಪಕ್ಷವಾಗಿ ಹಾಗೂ ನಿರ್ಭಯವಾಗಿ ಮತ ಚಲಾಯಿಸುವುದನ್ನು ಸಾಧ್ಯವಾಗುತ್ತಿಲ್ಲ.ಆದ್ದರಿಂದ ಚುನಾವಣೆಯ ನಡೆಯುವ ರಾಜ್ಯಗಳಲ್ಲಿ 6 ತಿಂಗಳ ಮೊದಲೇ ನೀತಿ ಸಂಹಿತೆಯನ್ನು ಜಾರಿ ಮಾಡಬೇಕೆಂದು ಸಮಾಜ ಸೇವಕ ಗುರುನಾಥ ವಡೆಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸುತ್ತಾರೆ.