ಔರಾದ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮ೦ಡಳಿ ಕಲಬುರಗಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಿ.ಬಿ.ಐ.ದಿಂದ ಸಮಗ್ರ ತನಿಖೆ ನಡೆಸಬೇಕೆಂದು ಸಮಾಜ ಸೇವಕ ಗುರುನಾಥ ವಡ್ಡೆಯವರು ಆಗ್ರಹಿಸಿದ್ದಾರೆ.
ಈ ಬಗ್ಗೆ ರಾಷ್ಟ್ರಪತಿಗಳು, ರಾಜ್ಯಪಾಲರು ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರು ಭಾರತ ಸರ್ಕಾರ ಇವರಿಗೆ ಬೀದರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ. ಸಿ.ಬಿ.ಐ. ತನಿಖೆ ನಡೆಸಬೇಕೆಂದು ಕೋರಿದ್ದಾರೆ.
ಮಂಡಳಿಯ ಅನುದಾನದಲ್ಲಿನ ಕಾಮಗಾರಿಗಳಲ್ಲಿ ಹಾಗೂ ಮಂಡಳಿಯ ವತಿಯಿಂದ ನಡೆದ ಕಾಮಗಾರಿಗಳಲ್ಲಿ ಕಾಮಗಾರಿಯ ಅಂದಾಜು ಪತ್ರಿಕೆ ತಯಾರಿ- ಕೆ/ ಡಿ.ಪಿ.ಆರ್. ತಯಾರಿಕೆಯಿಂದ ಟೆಂಡರ್ ಪ್ರಕಟಣೆ ಹಾಗೂ ಟೆಂಡರ್ ನೀಡುವಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರ ಘೋಷಿಸಿದಷ್ಟು ಅನುದಾನ ನೀಡದೇ, ಸರ್ಕಾರವು ಅನ್ಯಾಯ ಮಾಡಿರುತ್ತದೆ. ನೀಡಿದ ಅನುದಾನ ಖರ್ಚು ಮಾಡದೇ ಮಂಡಳಿ ಭ್ರಷ್ಟಾಚಾರ ಮಾಡಿರುತ್ತದೆ. ಮಂಡಳಿಯ ಕಾಮಗಾರಿಗಳು ವಿಳಂಬ ಆಗುತ್ತಿರುವುದು, ಕಳಪೆ ಕಾಮಗಾರಿ ಆಗುತ್ತಿರುವುದು, ಟೆಂಡರ್ ಹಗರಣ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಂಡಳಿ ಸಭೆ ನಡೆಸುವಲ್ಲಿ ಕಾನೂನು ನಿಯಮಗಳ ಉಲ್ಲಂಘನೆ, ಆಡಿಟ್ ಮಾಡದಿರುವುದು.
ಡಾ. ನಂಜುಂಡಪ್ಪ ವರದಿ ಪಾಲನೆ ಮಾಡದಿರುವುದು, ಅನಗತ್ಯ ಅವೈಜ್ಞಾನಿಕ ಕಾಮಗಾರಿಗಳು ಮಂಜೂರು ಮಾಡುವುದು ಈ ರೀತಿಯಾಗಿ ಎಲ್ಲ ಸ್ಥರದಲ್ಲಿ ಅನ್ಯಾಯ, ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಿದೆ. ಇದು ಮಂಡಳಿ ಸ್ಥಾಪಿಸುವ ಉದ್ದೇಶ ವಿಫಲವಾಗುತ್ತಿದೆ. ಅದರಿಂದ 2013- 14 ರಿಂದ 2022-23 ರ ವರೆಗಿನ ಕೆ.ಕೆ.ಆರ್.ಡಿ.ಬಿ.ಯ ಭ್ರಷ್ಟಾಚಾರವನ್ನು ಸಿ.ಬಿ.ಐ ಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕೆಂದು ಗುರುನಾಥ ವಡ್ಡೆಯವರು ಆಗ್ರಹಿಸಿದ್ದಾರೆ.