ಬೀದರ್: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 30 ಸ್ಥಾನಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್ ಹೇಳಿದರು.
ಬೀದರ್ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್‍ಪಿಐ ಡಾ.ಅಂಬೇಡ್ಕರ್ ಅವರು ಸ್ಥಾಪಿಸಿದ ಪಕ್ಷವಾಗಿದೆ. ಅಂಬೇಡ್ಕರ್ ಅವರ ಋಣ ತೀರಿಸಲು ಮತದಾರರು ಪಕ್ಷವನ್ನು ಬೆಂಬಲಿಸಬೇಕು ಎಂದರು.
ಬೀದರ್ ಶಾಸಕರ ನಿಷ್ಕಾಳಜಿಯಿಂದ 1200 ಮನೆಗಳ ಅನುದಾನ ಸರ್ಕಾರಕ್ಕೆ ಮರಳಿ ಹೋಗಿದೆ. ಮೈಲೂರಿನಲ್ಲಿ ಚರಂಡಿ ನಿರ್ಮಾಣಕ್ಕೆ ನಾಲ್ಕು ವರ್ಷದಿಂದ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಮೂರು ಬಾರಿ ಶಾಸಕರಾದ ರಹೀಂಖಾನ್ ಅವರು ಎಷ್ಟು ಜನ ದಲಿತರು, ಶೋಷಿತರಿಗೆ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಿದ್ದಾರೆ. ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಎಲ್ಲೆಲ್ಲಿ ಕಾಮಗಾರಿ ಕೈಗೊಂಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ದಲಿತರ ಬಗ್ಗೆ ಕಾಳಜಿ ಇದ್ದರೆ ವೀರಶೈವ ಜಂಗಮರು ಸುಳ್ಳು ಎಸ್.ಸಿ. ಬೇಡ ಜಂಗಮ ಪ್ರಮಾಣಪತ್ರ ಪಡೆದರೂ ಏಕೆ ವಿರೋಧಿಸಲಿಲ್ಲ.
ದಲಿತ ವಿರೋಧಿಯಾದ ಶಾಸಕರಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಬೇಕು ಎಂದು ಹೇಳಿದರು.
ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಅಮರ ಅಲ್ಲಾಪುರ, ಯುವ ಮುಖಂಡ ಪ್ರಕಾಶ ರಾವಣ ಇದ್ದರು.