ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಹುಕೋನ ಸ್ಪರ್ಧೆ ನಡೆಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಹಾಲಿ ಶಾಸಕ ಬಂಡೆಪ್ಪ ಕಾಶೆಂಪುರ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಟಿಕೆಟ್ ಘೋಷಿಸಿವೆ. ಕೆಲ ಆಕಾಂಕ್ಷಿಗಳಿದ್ದರೂ ಬಿಜೆಪಿ ಟಿಕೆಟ್ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅವರಿಗೆ ದೊರಕುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ ಟಿಕೆಟ್ ವಂಚಿತ ಚಂದ್ರಾಸಿಂಗ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಅಲ್ಪಸಂಖ್ಯಾತ ಮತಗಳು ಗಣನೀಯ ಸಂಖ್ಯೆಯಲ್ಲಿ ಇರುವ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸೀಮುದ್ದೀನ್ ಪಟೇಲ್ ಆಮ್ ಆದ್ಮಿ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.
ಬಹುಜನ ಸಮಾಜ ಪಕ್ಷದಿಂದ ಕಪಿಲ್ ಗೋಡಬೋಲೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಸಾರಥ್ಯದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಪಾಟೀಲ ಕಾಡವಾದ ಅಖಾಡಕ್ಕೆ ಧುಮುಕಲಿದ್ದಾರೆ. ಇನ್ನೂ ಅನೇಕರು ಸ್ಪರ್ಧೆ ಸಿದ್ಧತೆಯಲ್ಲಿದ್ದಾರೆ.
ಕ್ಷೇತ್ರದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪಕ್ಷಾಂತರ ಪರ್ವ ಮುಂದುವರಿದಿದೆ. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ನೆಗೆ-ಜಿಗಿತದಿಂದಾಗಿ ಲೆಕ್ಕಾಚಾರಗಳು ಬದಲಾಗುತ್ತಲೇ ನಡೆದಿವೆ.
ಜೆಡಿಎಸ್‍ನ ಹಾಲಿ ಶಾಸಕ ಬಂಡೆಪ್ಪ ಕಾಶೆಂಪುರ ಸ್ಥಾನ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ. ಪ್ರತಿ ಪಕ್ಷಗಳ ತಂತ್ರಗಳಿಗೆ ಪ್ರತಿ ತಂತ್ರ ರೂಪಿಸುತ್ತಿದ್ದಾರೆ. ಆಡಳಿತ ವಿರೋಧಿ ಅಲೆ, ಲಿಂಗಾಯತ ಮುಖಂಡರ ಮುನಿಸು ಮೊದಲಾದವು ಅವರ ಮುಂದಿರುವ ಸವಾಲುಗಳಾಗಿವೆ.
ಅಶೋಕ ಖೇಣಿ ಅವರು ಕಳೆದ ಬಾರಿಯ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅನೇಕ ತಿಂಗಳುಗಳಿಂದ ಕ್ಷೇತ್ರದಾದ್ಯಂತ ಸಂಚರಿಸುತ್ತ ಗೆಲುವಿಗೆ ತಯಾರಿ ನಡೆಸಿದ್ದಾರೆ. ‘ಶಾಸಕನಾಗಿದ್ದಾಗ ₹ 2,231 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.
ಇನ್ನಷ್ಟು ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ಕೊಡಿ’ ಎಂದು ಮತದಾರರಲ್ಲಿ ಕೋರುತ್ತಿದ್ದಾರೆ. ಚಂದ್ರಾಸಿಂಗ್ ಬಂಡಾಯ ಅಭ್ಯರ್ಥಿ ಆಗುವುದಾಗಿ ಘೋಷಿಸಿರುವುದು ಖೇಣಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ದಶಕದಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಚಂದ್ರಾಸಿಂಗ್ ತಮ್ಮದೇ ಆದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಚುನಾವಣೆ ಲೆಕ್ಕಾಚಾರ ಬುಡಮೇಲು ಮಾಡುವ ಶಕ್ತಿ ಹೊಂದಿದ್ದಾರೆ.
2013 ರಲ್ಲಿ ಕೆಜೆಪಿ, 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಶೈಲೇಂದ್ರ ಬೆಲ್ದಾಳೆ ಈಗ ಗೆಲ್ಲಲೇಬೇಕು ಎನ್ನುವ ಸಂಕಲ್ಪದೊಂದಿಗೆ ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಪಡೆಯೊಂದಿಗೆ ಮತದಾರರ ಮನ ಗೆಲ್ಲಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.
ಕ್ಷೇತ್ರಕ್ಕೆ ನಾಲ್ಕನೇ ಚುನಾವಣೆ: ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2008ರಲ್ಲಿ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣಕ್ಕೆ ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ನಾಲ್ಕನೆಯದ್ದು. ಹಾಲಿ ಶಾಸಕ ಬಂಡೆಪ್ಪ ಕಾಶೆಂಪುರ ಕ್ಷೇತ್ರದ ಮೊದಲ ಶಾಸಕರಾದ ಹಿರಿಮೆಗೆ ಪಾತ್ರರಾಗಿದ್ದಾರೆ. 2013ರಲ್ಲಿ ಅಶೋಕ ಖೇಣಿ ಆಯ್ಕೆಯಾಗಿದ್ದರು. 2018ರಲ್ಲಿ ಕಾಶೆಂಪುರ ಮತ್ತೆ ಕ್ಷೇತ್ರ ಕೈವಶ ಮಾಡಿಕೊಂಡಿದ್ದರು. ಈ ಬಾರಿ ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.