ಬೀದರ್: ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಏಪ್ರಿಲ್ 13ರಂದು ನಾಮಪತ್ರ ಸಲ್ಲಿಸುವೆ ಎಂದು ಕಾಂಗ್ರೆಸ್ ಮುಖಂಡ ಶಶಿಕುಮಾರ ಪೊಲೀಸ್ ಪಾಟೀಲ ಘೋಷಿಸಿದರು.
20 ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವೆ. ಬೀದರ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಿಗೆ ಅರ್ಜಿಯನ್ನೂ ಸಲ್ಲಿಸಿದ್ದೆ.
ಪಕ್ಷದ ಮುಖಂಡರು ನನ್ನನ್ನು ಕಡೆಗಣಿಸಿದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಗತಿಪರ ಚಿಂತಕರು, ದಲಿತ ಪರ ಕನ್ನಡ ಪರ ಸಂಘಟನೆಗಳ ಮುಖಂಡರು ಬಹಿರಂಗವಾಗಿ ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಏಪ್ರಿಲ್ 13ರಂದು ಬೆಳಿಗ್ಗೆ 11.30ಕ್ಕೆ ನಗರದ ಖಾದಿ ಭಂಡಾರ ಬಳಿಯ ಭವಾನಿಮಾತೆ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್, ಭೀಮವಾದ ಸೇನೆಯ ಕಲ್ಯಾಣರಾವ್ ಭೋಸ್ಲೆ, ಮಾದರ ಚನ್ನಯ್ಯ ಹೋರಾಟ ಸಮಿತಿಯ ರಮೇಶ ಕಟ್ಟಿತೂಗಾಂವ, ದಲಿತ ಮೈನಾರಿಟಿ ಮುಖಂಡ ಕಂಟೆಪ್ಪ ಗುಮ್ಮೆ ಇದ್ದರು.