ಬೀದರ್: ಟಿಕೆಟ್ ಸಿಗದಕ್ಕೆ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಹಾಲಿ ಶಾಸಕ ಸೂರ್ಯಕಾಂತ ನಾಗಮಾರಪಳ್ಳಿ ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ದಳ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಇಂದು ಅಥವಾ ಸೋಮವಾರ ಜೆಡಿಎಸ್ ಸೇರುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಚಿಹ್ನೆಯ ಜೊತೆ ಸೂರ್ಯಕಾಂತ ಅವರ ಫೋಟೋಗಳನ್ನು ಅಭಿಮಾನಿಗಳು ಹರಿಯಬಿಟ್ಟಿದ್ದಾರೆ.
ಬೀದರ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದ್ದಕ್ಕೆ ನಾಗಮಾರಪಳ್ಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆರಂಭದಲ್ಲಿ ಮುಂದಾಗಿದ್ದರು. ಚೀಟಿ ಸಂಗ್ರಹದಲ್ಲಿ ಬಹುತೇಕ ಬೆಂಬಲಿಗರು ಜೆಡಿಎಸ್ ಸೇರಿ ಎಂದಿದ್ದರು. ಬೆಂಬಲಿಗರ ಅಭಿಪ್ರಾಯದಂತೆ ಸೂರ್ಯಕಾಂತ ನಾಗಮಾರಪಳ್ಳಿ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಸಾಮಾನ್ಯ ಕಾರ್ಯಕರ್ತನಾಗಿ 35 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈಶ್ವರ್ ಸಿಂಗ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ.