ಬೀದರ್: ಬೀದರ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಿಂದ ಬೃಹತ್ ಮೆರವಣಿಗೆ ನಡೆಯಿತು. ಕ್ಷೇತ್ರದ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳು ಪಾಲ್ಗೊಂಡು ಬಲ ಪ್ರದರ್ಶಿಸಿದರು.
ರೋಡ್ ಶೋ ಮಾದರಿಯಲ್ಲಿ ನಡೆದ ಮೆರವಣಿಗೆಯಲ್ಲಿ ಅಭಿಮಾನಿ- ಬೆಂಬಲಿಗರು ಜಯಘೋಷ ಹಾಕಿ ಸಂಭ್ರಮಿಸಿದರು. ಸೂರ್ಯಕಾಂತ ನಾಗಮಾರಪಳ್ಳಿ ಕೊಡುಗೆ, ಸೇವೆಯನ್ನು ಬಣ್ಣಿಸುವ ಹಾಡುಗಳ ಗಾಯನವೂ ನಡೆಯಿತು.
ಬಾಜಾ ಭಜಂತ್ರಿಯೊಂದಿಗೆ ನಡೆದ ಮೆರವಣಿಗೆಯು ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತು. ಮೆರವಣಿಗೆ ಉದ್ದಕ್ಕೂ ಕಾರ್ಯಕರ್ತರು ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಜಯವಾಗಲಿ, ಬೀದರ್ ಅಭಿವೃದ್ಧಿಗಾಗಿ ಸೂರ್ಯಕಾಂತ ನಾಗಮಾರಪಳ್ಳಿಗೆ ಬೆಂಬಲಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಬೆಂಬಲಿಗರೊಂದಿಗೆ ಹೆಜ್ಜೆ ಹಾಕಿದರು.ಮೆರವಣಿಗೆ ಮಾರ್ಗದಲ್ಲಿನ ಮಹಾ ಪುರುಷರ ಮೂರ್ತಿಗಳಿಗೆ ಶಾಸಕ ಬಂಡೆಪ್ಪ ಕಾಶೆಂಪುರ, ಉಮಾಕಾಂತ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಮೆರವಣಿಗೆಗೆ ಮುನ್ನ ಸೂರ್ಯಕಾಂತ ನಾಗಮಾರಪಳ್ಳಿ ಅವರು ಗಾಂಧಿಗಂಜ್‍ನ ಬಸವೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಮುಖಂಡರಾದ ಬಸವರಾಜ ಧನ್ನೂರ, ಮಾರುತಿ ಬೌದ್ಧೆ, ಜೆಡಿಎಸ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಫನಾರ್ಂಡಿಸ್ ಹಿಪ್ಪಳಗಾಂವ್, ಝರೆಪ್ಪ ಮಮದಾಪುರ, ಶಶಿಕುಮಾರ ಪಾಟೀಲ ಸಂಗಮ, ವೀರಶೆಟ್ಟಿ ಪಟ್ನೆ, ಭೀಮರಾವ್ ಪಾಟೀಲ ಡಿಗ್ಗಿ, ಐಲಿನ್ ಜಾನ್ ಮಠಪತಿ, ಲಲಿತಾ, ಸರ್ಫರಾಜ್ ಹಾಸ್ಮಿ, ವಿಷ್ಣುವರ್ಧನ್ ವಾಲ್ದೊಡ್ಡಿ, ಅರುಣ ಹೋತಪೇಟ್, ಅಭಿ ಕಾಳೆ, ಸುಂದರರಾಜ್, ಪ್ರಶಾಂತ, ಬೊಮ್ಮಗೊಂಡ ಚಿಟ್ಟಾವಾಡಿ ಪಾಲ್ಗೊಂಡಿದ್ದರು.