ಬೀದರ್: ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಹಾಗೂ ನೈಸರ್ಗಿಕ ರಮಣೀಯ ಸ್ಥಳಗಳನ್ನು ಹೊಂದಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಅದನ್ನು ಬೆಳೆಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳಾಗುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಬೀದರ್, ಬಸವಕಲ್ಯಾಣ ಹಾಗೂ ಭಾಲ್ಕಿಯಲ್ಲಿ ಕೋಟೆಗಳಿವೆ. ಅದರಲ್ಲೂ ಬೀದರ್‌ನ ಬಹಮನಿ ಕೋಟೆ, ಮಹಮೂದ್ ಗವಾನ ಮದರಸಾ, ಸೌಹಾರ್ದದ ಪ್ರತೀಕದಂತಿರುವ ಅಷ್ಟೂರಿನ ಗುಂಬಜಗಳು, ನರಸಿಂಹ ಝರಣಿ ಗುಹಾಂತರ ದೇವಾಲಯ, ಗುರುನಾನಕ ಝೀರಾ, ಪಾಪನಾಶ, ಮಾಂಜ್ರಾ ನದಿ ಪ್ರದೇಶ ಹೀಗೆ ಹಲವು ಪ್ರವಾಸಿ ತಾಣಗಳಿವೆ.
ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಬೀದರ್ ಕೋಟೆ, ಗವಾನ ಮದರಸಾ, ಅಷ್ಟೂರಿನ ಗುಂಬಜಗಳಿಗೆ ರಕ್ಷಣೆ ಸಿಕ್ಕಿದೆ. ಅವುಗಳ ಆಸ್ತಿ ರಕ್ಷಿಸುವ ಕೆಲಸವಾಗಿದೆ. ಆದರೆ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಏನಾದರೂ ಕೆಲಸಗಳಾಗಿವೆಯೇ ಎಂದು ನೋಡಿದರೆ ನಿರಾಸೆಯೇ ಹೆಚ್ಚು ಎದ್ದು ಕಾಣುತ್ತದೆ. ವಿಶಾಲವಾದ ಬೀದರ್ ಕೋಟೆಯನ್ನು ನಡೆದುಕೊಂಡೇ ನೋಡಬೇಕು. ಬ್ಯಾಟರಿಚಾಲಿತ ವಾಹನಗಳಾಗಲಿ, ಕುದುರೆ ಗಾಡಿಗಳು ಅಥವಾ ಇನ್ನಿತರೆ ಯಾವುದೇ ವ್ಯವಸ್ಥೆ ಇಲ್ಲ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ವಿಶಾಲವಾದ ಪ್ರದೇಶದಲ್ಲಿ ಸುತ್ತಾಡಿ ನೋಡಲು ಕಷ್ಟದ ಕೆಲಸ. ಇನ್ನು, ಈ ಹಿಂದೆ ಕೋಟೆಯೊಳಗಿದ್ದ ಕ್ಯಾಂಟೀನ್ ಬಾಗಿಲು ಮುಚ್ಚಿರುವುದರಿಂದ ಜನರಿಗೆ ಉಪಾಹಾರ, ಊಟಕ್ಕಾಗಿ ಯಾವುದೇ ವ್ಯವಸ್ಥೆ ಇಲ್ಲ. ಅದರ ಸುತ್ತಮುತ್ತಲಿನ ಪರಿಸರದಲ್ಲಿ ಹೇಳಿಕೊಳ್ಳುವಂತಹ ಹೋಟೆಲ್‌ಗಳಿಲ್ಲ. ಪ್ರವಾಸಿಗರು ಪುನಃ ನಗರದ ಹೃದಯ ಭಾಗಕ್ಕೆ ಹೋಗಬೇಕು.
ನರಸಿಂಹ ಝರಣಿ ಗುಹಾಂತರ ದೇವಾಲಯ ಅದರದೇ ಆದ ವಿಶೇಷತೆ ಹೊಂದಿದೆ. ದೇವರ ದರ್ಶನಕ್ಕಾಗಿ ಎದೆಮಟ್ಟದ ವರೆಗೆ ನೀರಿನಲ್ಲೇ ಹೋಗಿ ಬರಬೇಕು. ಆದರೆ, ಆ ದೇವಸ್ಥಾನದಲ್ಲೂ ಭಕ್ತರಿಗೆ ಹೇಳಿಕೊಳ್ಳುವಂತಹ ವ್ಯವಸ್ಥೆ ಇಲ್ಲ. ಇನ್ನು, ಪ್ರಕೃತಿಯ ನಡುವೆ ನೆಲೆಸಿರುವ ಪಾಪನಾಶ ದೇವಸ್ಥಾನ ಹಾಗೂ ಅಲ್ಲಿನ ಕೆರೆ ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟೊಂದು ಪ್ರಕೃತಿಯ ಸಿರಿವಂತಿಕೆ ಅಲ್ಲಿದೆ. ಈಗಾಗಲೇ ಅಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ, ಪ್ರವಾಸಿಗರು ಅಲ್ಲಿಗೆ ಬಂದು ಹೋಗಲು ಯಾವ ರೀತಿಯ ವ್ಯವಸ್ಥೆ ಕಲ್ಪಿಸುತ್ತಾರೆ ನೋಡಬೇಕಿದೆ.
ಗುರುನಾನಕ ಝೀರಾ ಅನ್ನು ಸಿಖ್ ಸಮುದಾಯದವರೇ ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ಅಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಸ್ವಚ್ಛತೆ, ಎಲ್ಲಾ ರೀತಿಯಿಂದ ಉತ್ತಮ ನಿರ್ವಹಣೆ ಮಾಡುವುದರಿಂದ ಎಲ್ಲರ ಆಕರ್ಷಣೀಯ ತಾಣವಾಗಿ ಬದಲಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಖಾಸಗಿಯವರು ಇಷ್ಟೊಂದು ಉತ್ತಮ ಕೆಲಸ ಮಾಡಬಹುದಾದರೆ ಆಡಳಿತಕ್ಕೆ ಈ ಕೆಲಸ ಮಾಡಲು ಏಕೆ ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.
ಮಾಂಜ್ರಾ ನದಿ ಹರಿದು ಹೋಗುವ ಕೌಠಾ, ಜನವಾಡ ಪರಿಸರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಚಟುವಟಿಕೆಗಳಿಗೆ ಅವಕಾಶ ಇದೆ. ಅಲ್ಲಿ ಖಾಸಗಿಯವರ ಅನೇಕ ಹೋಟೆಲ್, ರೆಸಾರ್ಟ್‌ಗಳು ತಲೆ ಎತ್ತಿವೆ. ಎತ್ತುತ್ತಿವೆ. ಆದರೆ, ಸರ್ಕಾರದಿಂದ ಆ ನಿಟ್ಟಿನಲ್ಲಿ ಯಾವುದೇ ಯೋಚನೆ, ಚರ್ಚೆಗಳಾಗಿಲ್ಲ. ಕಲ್ಯಾಣದಲ್ಲಿ ಶರಣರು ನೆಲೆಸಿ ಹೋದ ಅನೇಕ ತಾಣಗಳಿವೆ. ಅವುಗಳಲ್ಲಿ ಬಹುತೇಕ ಜೀರ್ಣೊದ್ಧಾರ ಕಂಡಿವೆ. ಇನ್ನು ಕೆಲವು ಕಡೆ ಕೆಲಸ ಪ್ರಗತಿಯಲ್ಲಿದೆ. ಆದರೆ, ಅಲ್ಲೂ ಕೂಡ ಕನಿಷ್ಠ ಮಾಹಿತಿಗೆ ಗೈಡ್‌ಗಳ ವ್ಯವಸ್ಥೆ ಇಲ್ಲ. ಭಾಲ್ಕಿ ಕೋಟೆ ಹಾಗೂ ಕಾರಂಜಾ ಜಲಾಶಯದಲ್ಲೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಬಹುದು. ಹಿಂದಿನ ಸರ್ಕಾರ ಹಾಗೂ ಹಾಲಿ ಸರ್ಕಾರದ ಅವಧಿಯಲ್ಲಿ ಕಾರಂಜಾ ಜಲಾಶಯವನ್ನು ಬೃಂದಾವನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಮಾತುಗಳು ಕೇಳಿ ಬಂದಿವೆ. ಆದರೆ, ಅದು ಮಾತುಗಳಿಗಷ್ಟೇ ಸೀಮಿತವಾಗಿದೆ.