ಕಮಲನಗರ: ಗೌರಿ ಗಣೇಶ ಹಾಗೂ ಈದ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೇಟ್ಟಿ ನೇತೃತ್ವದಲ್ಲಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೋಲೀಸ ಪಥ ಸಂಚಲನ ನಡೆಯಿತು.
ಪಟ್ಟಣದ ಪೋಲೀಸ ಠಾಣೆಯ ಆವರಣದಿಂದ ಹೊರಟ ಪಥ ಸಂಚಲನವು ಅಲ್ಲಮಪ್ರಭು ವೃತ್ತ, ರಾಷ್ಟ್ರೀಕಾಯ ಹೆದ್ದಾರಿ, ಸೋನಾಳ ಮುಖ್ಯ ರಸ್ತೆ, ಅತಿಥಿ ಗೃಹ, ಡಾ. ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನ, ಬಸವೇಶ್ವರ ವೃತ್ತ, ಗ್ರಾಮ ಪಂಚಾಯತ ಕಾರ್ಯಾಲಯ, ಅಕ್ಕಮಹಾದೇವ ವೃತ್ತದಿಂದ ಸಾಗಿ ಶಿವಾಜಿ ವೃತ್ತ, ನ್ಯೂ ಭೀಮನಗರ, ತಹಸೀಲ್ ಕಚೇರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಮಾಡಲಾಯಿತು.
ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೇಟ್ಟಿ ಮಾತನಾಡಿ, ಎಲ್ಲಾ ಸಮುದಾಯದವರು ಪರಸ್ಪರ ಪ್ರೀತಿ, ಸೌಹಾರ್ದತೆ, ಸದ್ಭಾವನೆಯಿಂದ ಎರಡೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು. ಯಾವುದೇ ರೀತಿಯ ಅಹೀತಕರ ಘಟನೆಗಳನ್ನು ನಡೆಯದಂತೆ ಆಯಾ ಗಣೇಶ ಮಂಡಳಿಗಳು ಮತ್ತು ಈದ ಮೀಲಾದ್ ಹಬ್ಬದ ಸಮೀತಿಯವರು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಲ್ಲದೇ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೌಡಿ ಶೀಟರ್‌ಗಳನ್ನು ಕರೆಯಿಸಿ ಈ ಎರಡು ಹಬ್ಬಗಳಲ್ಲಿ ಯಾವುದೇ ರೀತಿಯ ತಂಟೆ ತಕರಾರು ಆಗದಂತೆ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಗಲಭೆಯಲ್ಲಿ ಶಾಮಿಲಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಮೀಸಲು ಪೋಲೀಸ ಪಡೆ, ಡಿಆರ್ ಪೋಲೀಸ ಪಡೆ, ಸಿವಿಲ್ ಪೋಲೀಸ ಪಡೆ, ಗೃಹ ರಕ್ಷಕ ದಳದವರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಔರಾದ ಸಿಪಿಐ ರಘುವೀರಸಿಂಗ ಠಾಕೂರ, ಕಮಲನಗರ ಪಿಎಸ್‌ಐ ಚಂದ್ರಶೇಖರ ನಿರ್ಣೆ, ಠಾಣಾಕುಶನೂರ ಪಿಎಸ್‌ಐ ಉದಂಡಪ್ಪಾ ಹಾಗೂ ಪೋಲೀಸ ಸಿಬ್ಬಂಧಿ ಇದ್ದರು.