ಬೀದರ್: ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ(ಡಬ್ಲ್ಯು) ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ದಲಿತ ಮಹಿಳೆ ಅಂಬಿಕಾ ನೇಮಕಗೊಂಡಿದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ತಾಲ್ಲೂಕು ಕೇಂದ್ರದಿಂದ 13 ಕಿ.ಮೀ.ದೂರದಲ್ಲಿರುವ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ. ಕಳೆದ ವರ್ಷ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದೇನೆ. ಗ್ರಾಮದ ಮನೆ ಮನೆಗೆ ತೆರಳಿ ಮನವಿ ಮಾಡಿದ್ದೇನೆ. ಆದರೂ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ. ಸಹಾಯಕಿ ಇಲ್ಲದ ಕಾರಣ ನಾನೇ ಅಡುಗೆ ತಯಾರಿಸುತ್ತಿದ್ದೇನೆ ಎಂದು ಅಂಗನವಾಡಿ ಕಾರ್ಯಕರ್ತೆ ಅಂಬಿಕಾ ಬೇಸರ ವ್ಯಕ್ತಪಡಿಸಿದರು.
ಬ್ಯಾಲಹಳ್ಳಿ(ಡಬ್ಲ್ಯು) ಕೇಂದ್ರಕ್ಕೆ ಹಿಂದೆಯೇ ಭೇಟಿ ನೀಡಿ, ಪಾಲಕರಿಗೆ ತಿಳಿವಳಿಕೆ ನೀಡಲಾಗಿದೆ. ಆದರೂ, ಮಕ್ಕಳನ್ನು ಕಳಿಸದಿರುವುದು ಬೇಸರದ ಸಂಗತಿ. ಎರಡು ದಿನಗಳಲ್ಲಿ ಗ್ರಾ.ಪಂ ಅಧ್ಯಕ್ಷ ಹಾಗೂ ಮುಖಂಡರ ಜತೆ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭಾಲ್ಕಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಾಳುವಾಲೆ ‘ ತಿಳಿಸಿದರು.