ಕಲಬುರಗಿ (ಏ.19): ರಾಜಕೀಯ ದುಡ್ಡಿದ್ದವರ ಆಟ, ಅದರ ಉಸಾಬರೀನೇ ಬೇಡವೆಂದು ವಿದ್ಯಾವಂತರು, ಪ್ರಾಮಾಣಿಕರು ಮೂಗು ಮುರಿಯೋ ಈ ಕಾಲದಲ್ಲಿ ಇಲ್ಲೊಬ್ಬರು ಜಡ್ಜ್ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ, ಹದಗೆಡುತ್ತಿರುವ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇಂತಹ ಸಾಹಸಕ್ಕೆ ಕೈ ಹಾಕಿದವರು ಕಿರಿಯ ಸಿವಿಲ್ ನ್ಯಾಯಾಧೀಶ ಸುಭಾಶ್ಚಂದ್ರ ರಾಠೋಡ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಂಕದಾಳ ಗ್ರಾಮದ ಸುಭಾಶ್ಚಂದ್ರ ರಾಠೋಡ, ತಮ್ಮ 7 ವರ್ಷಗಳ ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿ. ಜೆಡಿಎಸ್ ಸೇರಿ ತಮ್ಮ ಬದುಕಿನ ಹೊಸ ಪಯಣಕ್ಕೆ ಮುನ್ನುಡಿ ಬರೆದಿದ್ದಾರೆ.
ಜೆಡಿಎಸ್ ಇವರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿಸಿದೆ. ಸಮಾಜ ಸುಧಾರಣೆಯಲ್ಲಿ ಪ್ರಮುಖ ಯೋಗದಾನ ನೀಡುತ್ತಿರುವ ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ, ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಂದ ಸ್ಫೂರ್ತಿ ಪಡೆದ ಸುಭ್ಚಾಂದ್ರ, ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ‘ಭ್ರಷ್ಟಾಚಾರ ಮುಕ್ತ ನಾವು- ಸಮಾಜ’ ಎಂಬ ಸಂಘಟನೆ ಕಟ್ಟಿಹೋರಾಟ ಮಾಡಿದವರು. ಈಗ ರಾಜಕೀಯಕ್ಕೆ ಧುಮುಕಿದ್ದಾರೆ.