News Kannada
Saturday, February 24 2024
ಕಲಬುರಗಿ

ಕೆಇಎ ಪರೀಕ್ಷೆ ಅಕ್ರಮ: ಇನ್ನೂ ಪತ್ತೆಯಾಗದ ಬ್ಲೂಟೂತ್ ಕಿಂಗ್‌ಪಿನ್ ಆರ್.ಡಿ. ಪಾಟೀಲ

KEA exam illegal: Bluetooth kingpin RD Singh yet to be traced Patil
Photo Credit : News Kannada

ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆ ಬರೆಯಲು ಹಣ ಪಡೆದು ಬ್ಲೂಟೂತ್ ಪೂರೈಸಿದ್ದ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ನಾಪತ್ತೆಯಾಗಿದ್ದು, ಅಕ್ರಮ ಬಯಲಿಗೆ ಬಂದು ನಾಲ್ಕು ದಿನ ಕಳೆದರೂ ಆತನ ಸುಳಿವಿಲ್ಲ.ಆರೋಪಿಯ ಪತ್ತೆಗಾಗಿ ಎರಡು ತಂಡಗಳು ಮಹಾರಾಷ್ಟ್ರ ಮತ್ತು ಬೆಂಗಳೂರಿಗೆ ತೆರಳಿವೆ.

ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಪಾಟೀಲ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಕುಟುಂಬಸ್ಥರನ್ನು ವಿಚಾರಿಸಿದಾಗ, ‘ಅ.24ರಂದು ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಫೋನ್‌ ನಂಬರ್ ಕೂಡ ಸ್ವಿಚ್ಡ್‌ ಆಫ್ ಆಗಿದೆ’ ಎಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಸಂಬಂಧ ಈ ಹಿಂದೆ ಹೈಕೋರ್ಟ್‌ನ ಕಲಬುರಗಿ ಪೀಠದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದ ಪಾಟೀಲ, ಬಿಡುಗಡೆಯಾದ ದಿನದಿಂದಲೇ ನಾಪತ್ತೆಯಾಗಿದ್ದ. ಸಿಐಡಿ ಪೊಲೀಸರು ಹಲವು ನೋಟಿಸ್ ಜಾರಿಗೊಳಿಸಿದ್ದರೂ ಹಾಜರಾಗಿರಲಿಲ್ಲ. ಕೆಲ ದಿನಗಳ ಬಳಿಕ ಹಾಜರಾಗಿದ್ದ. ಕೆಇಎ ಹಗರಣದಲ್ಲೂ ಅದೇ ಹಾದಿ ತುಳಿದಿದ್ದಾನೆ.

ಅಫಜಲಪುರದಲ್ಲಿ ಅಭ್ಯರ್ಥಿಯಿಂದ ಬ್ಲೂಟೂತ್ ಡಿವೈಸ್‌ ಪಡೆದು ಪರಾರಿಯಾದ ಆಸೀಫ್‌ಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.ಅಫಜಲಪುರ, ಅಶೋಕನಗರ ಹಾಗೂ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ಬಂಧಿತ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಆರ್‌.ಡಿ. ಪಾಟೀಲ ಕಳೆದ 8 ವರ್ಷಗಳಿಂದ ಕೆಪಿಎಸ್‌ಸಿ, ಪಿಎಸ್‌ಐ, ಪೊಲೀಸ್, ಪಿಡಬ್ಲ್ಯುಡಿ, ಅರಣ್ಯ, ಎಂಜಿನಿಯರ್ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಪಳಗಿದ್ದಾನೆ. ಅಕ್ರಮವಾಗಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳನ್ನು ತಾನೇ ಖುದ್ದಾಗಿ ಸಂಪರ್ಕಿಸಿ, ಅವರೊಂದಿಗೆ ಹಣದ ಒಪ್ಪಂದ ಮಾಡಿಕೊಳ್ಳುತ್ತಾನೆ. ತನ್ನ ಅಕ್ರಮ ಜಾಲದ ಮೂಲಕ ಪರೀಕ್ಷೆ ದಿನ ಬ್ಲೂಟೂತ್ ಸರಬರಾಜು ಮತ್ತು ಉತ್ತರ ಹೇಳುವರ, ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್‌ ಶೀಟ್‌ ತಿದ್ದುವ ವ್ಯವಸ್ಥೆ ಮಾಡುತ್ತಾನೆ. ಪರೀಕ್ಷೆ ನಡೆಯುವ ಹಿಂದಿನ ದಿನ ಅಥವಾ ಕೆಲವು ದಿನಗಳ ಮುಂಚಿತವಾಗಿ ಜಿಲ್ಲೆಯಿಂದ ಪಲಾಯನ ಮಾಡುತ್ತಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸರ್ಕಾರಿ ನೌಕರಿ ಸೊನ್ನ ಸಾಹುಕಾರನ ಕಿಸೆದಾಗ ಐತಿ’ ಎಂಬ ಜನರೂಢಿಯ ಮಾತು ಆರ್‌.ಡಿ. ಪಾಟೀಲನ ಸ್ವಗ್ರಾಮದಲ್ಲಿದೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಪಾಟೀಲ, ಹಳ್ಳಿ ಹಳ್ಳಿಗೆ ಪ್ರಚಾರಕ್ಕೆ ಹೋದಾಗ, ‘ಡಿ.ಸಿ, ಎ.ಸಿ ಬಿಟ್ಟು ಉಳಿದ ಎಲ್ಲ ನೌಕರಿ ಕೊಡಿಸುವೆ’ ಎಂದು ಭರವಸೆ ಕೊಟ್ಟಿದ್ದ ಎಂಬ ಮಾತುಗಳು ಕೇಳಿಬರುತ್ತಿವೆ.

19ಕ್ಕೂ ಹೆಚ್ಚು ಪ್ರಕರಣ ದಾಖಲು: ಪಿಎಸ್‌ಐ ಹಗರಣ, ಕೆಇಎ ಬ್ಲೂಟೂತ್ ಅಕ್ರಮ, ಕೌಟುಂಬಿಕ ಪ್ರಕರಣ ಸೇರಿ ರುದ್ರಗೌಡ ಪಾಟೀಲನ ವಿರುದ್ಧ 19 ಪ್ರಕರಣಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಬೆಂಗಳೂರು, ತುಮಕೂರು, ಧಾರವಾಡ, ಕಲಬುರಗಿ, ಯಾದಗಿರಿಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ಪೈಕಿ ಪಿಎಸ್‌ಐ ಹಗರಣ ಸಂಬಂಧ 11 ತಿಂಗಳು ಜೈಲಿನಲ್ಲಿ ಇದ್ದು ಸಿಐಡಿ ವಿಚಾರಣೆ ಎದುರಿಸಿ ಹೊರಬಂದಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು