News Karnataka Kannada
Friday, March 29 2024
Cricket
ಕರಾವಳಿ

ರಂಗೇರಲಿದೆ ನಗರ ಪಂಚಾಯತ್ ಚುನಾವಣಾ ಕಣ ಸಿದ್ಧ

Photo Credit :

ರಂಗೇರಲಿದೆ ನಗರ ಪಂಚಾಯತ್ ಚುನಾವಣಾ ಕಣ ಸಿದ್ಧ

ಸುಳ್ಯ: ನಗರ ಪಂಚಾಯಿತಿಯ ಆಡಳಿತ ಮಂಡಳಿಗೆ ಮೇ.29ರಂದು ಚುನಾವಣೆ ನಡೆಯಲಿದ್ದು ರಾಜಕೀಯ ಕಣ ರಂಗೇರುತಿದೆ. ಮಾ.10 ರಂದು ಆಡಳಿತ ಮಂಡಳಿಯ ಅವಧಿ ಮುಗಿದಿದ್ದು ಲೋಕಸಭಾ ಚುನಾವಣೆ ಘೋಷಣೆಯಾದ ಕಾರಣ ನಗರ ಪಂಚಾಯಿತಿ ಚುನಾವಣೆ ಮುಂದೆ ಹೋಗಿತ್ತು. ಇದೀಗ ಚುನಾವಣೆ ಘೋಷಣೆಯಾಗಿದ್ದು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಸುಳ್ಯದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣಾ ಕಾವು ಏರಲಿದೆ.

2013 ಮಾರ್ಚ್‍ನಲ್ಲಿ ಸುಳ್ಯ ನಗರ ಪಂಚಾಯಿತಿ ಚುನಾವಣೆ ನಡೆದಿತ್ತು. ಇದೀಗ ಮತ್ತೆ ಆರು ವರ್ಷಗಳ ಬಳಿಕ ಮತ್ತೊಮ್ಮೆ ನಗರದ ಜನತೆ ಬೂತ್‍ನೆಡೆಗೆ ತೆರಳಲಿದ್ದಾರೆ. 2013ರಲ್ಲಿ ಚುನಾವಣೆ ನಡೆದರೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆದು ಆಡಳಿತ ಮಂಡಳಿ ಅಧಿಕಾರಕ್ಕೇರಲು ಒಂದು ವರ್ಷ ವಿಳಂಬವಾದ ಕಾರಣ ಆಡಳಿತ ಅವಧಿ 2019 ಮಾರ್ಚ್‍ನಲ್ಲಿ ಕೊನೆಗೊಂಡಿತ್ತು.

ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆ: ಮತ್ತೊಮ್ಮೆ ಬಿಜೆಪಿ-ಕಾಂಗ್ರೆಸ್ ಮಧ್ಯೆಯ ಜಿದ್ದಾ ಜಿದ್ದಿಗೆ ಸುಳ್ಯದಲ್ಲಿ ವೇದಿಕೆ ಸಿದ್ಧವಾಗಿದೆ. ಸತತ ಮೂರು ಬಾರಿ ನಗರ ಪಂಚಾಯಿತಿ ಆಡಳಿತವನ್ನು ನಡೆಸಿರುವ ಬಿಜೆಪಿ ಮತ್ತೊಮ್ಮೆ ಪಾರಮ್ಯ ಮೆರೆಯಲು ಸಿದ್ಧತೆ ಮಾಡಿದ್ದರೆ. ಮೂರು ಬಾರಿ ಕಳೆದು ಕೊಂಡ ಆಡಳಿತವನ್ನು ಮರಳಿ ಪಡೆಯಲು ಕಾಂಗ್ರೆಸ್ ತವಕಿಸುತಿದೆ. 2004ರ ಬಳಿಕ ನಗರ ಪಂಚಾಯಿತಿಯಲ್ಲಿ ಬಿಜೆಪಿ ತನ್ನ ಸಂಪೂರ್ಣ ಪಾರಮ್ಯವನ್ನು ಮುಂದುವರಿಸಿದೆ. 2004, 2008, 2013ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಹಿಡಿದಿತ್ತು. 2013ರಲ್ಲಿ 18 ವಾರ್ಡ್‍ಗಳಲ್ಲಿ 12 ಬಿಜೆಪಿ, ಐದು ಕಾಂಗ್ರೆಸ್ ಮತ್ತು ಒಂದು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದರು. 2008ರ ಚುನಾವಣೆಯಲ್ಲಿ ಒಂಭತ್ತು ಬಿಜೆಪಿ, ಆರು ಕಾಂಗ್ರೆಸ್, ಒಂದು ಜೆಡಿಎಸ್ ಮತ್ತು ಎರಡು ಪಕ್ಷೇತರರು ಜಯ ಗಳಿಸಿದ್ದರು. ಬಳಿಕ ಪಕ್ಷೇತರರು ಬಿಜೆಪಿ ಸೇರಿದ ಕಾರಣ ಬಿಜೆಪಿ ಬಲ 11ಕ್ಕೆ ಏರಿತ್ತು.
ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಜೊತೆ ಮೈತ್ರಿ ಏರ್ಪಟ್ಟಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವ ನಿಲುವು ತಳೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ. ಕಳೆದ ಬಾರಿ ನಗರ ಪಂಚಾಯಿತಿಯಲ್ಲಿ ಖಾತೆ ತೆರೆದದ್ದ ಎಸ್‍ಡಿಪಿಐ ಈ ಬಾರಿಯೂ ಕೆಲವು ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಸಲಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ತಣ್ಣಗಾಗಿದ್ದ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಲಿದೆ.

ವಾರ್ಡ್‍ಗಳ ಸಂಖ್ಯೆ ಇಪ್ಪತ್ತಕ್ಕೆ: 18 ವಾರ್ಡ್‍ಗಳಿದ್ದ ನಗರ ಪಂಚಾಯಿತಿಯಲ್ಲಿ ಎರಡು ವಾರ್ಡ್‍ಗಳು ಏರಿಕೆಯಾಗಿದ್ದು ಒಟ್ಟು ಇಪ್ಪತ್ತು ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಆರು ತಿಂಗಳ ಹಿಂದೆಯೇ ವಾರ್ಡ್‍ಗಳ ಮರು ವಿಂಗಡಣೆ ಮೀಸಲಾತಿ ಪ್ರಕಟಗೊಂಡಿತ್ತು. ಚುನಾವಣೆಗಾಗಿ 20 ಬೂತ್‍ಗಳನ್ನು ಸಿದ್ಧಪಡಿಸಲಾಗುವುದು. ನಗರದಲ್ಲಿ ಒಟ್ಟು 2011ರ ಜನಗಣತಿಯ ಪ್ರಕಾರ 19,958 ಜನಸಂಖ್ಯೆಯಿದ್ದು 6,854 ಪುರುಷರು ಮತ್ತು 7026 ಮಹಿಳೆಯರು ಸೇರಿ 13,880 ಮತದಾರರಿದ್ದಾರೆ.

ಅಭಿವೃದ್ಧಿ ಅಜೆಂಡಾ: ನಗರ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಪ್ರತಿಷ್ಠೆಯ ಜೊತೆಗೆ ನಗರದಲ್ಲಿನ ಅಭಿವೃದ್ಧಿ ಕಾರ್ಯಗಳು ಕೂಡ ಚರ್ಚಿತ ವಿಷಯವಾಗಲಿದೆ. ನಗರದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನವಾಗದ ಒಳ ಚರಂಡಿ ಯೋಜನೆ, ನಗರದ ಚರಂಡಿಗಳು, ಕಸ ವಿಲೇವಾರಿಗೆ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಆಶ್ರಯ ವಸತಿಗೆ ಸ್ಥಳದ ಕೊರತೆ ಈ ವಿಷಯಗಳು ಕಳೆದ ಎರಡು ಚುನಾವಣೆಯಲಲಿಯೂ ಚರ್ಚಾ ವಿಷಯವಾಗಿದ್ದವು. ಆದರೆ ಈ ವಿಷಯಗಳಿಗೆ ಪರಿಪೂರ್ಣ ವಿರಾಮ ಹಾಕಲು ಇನ್ನೂ ಸಾಧ್ಯವಾಗಿಲ್ಲ. ಈ ಸಮಸ್ಯೆಗಳು ನಗರದಲ್ಲಿ ಇನ್ನೂ ಜೀವಂತವಾಗಿಯೇ ಇದೆ. ಆದುದರಿಂದ ಈ ಚುನಾವಣೆಯಲಲ್ಲಿಯೂ ಮತ್ತೊಮ್ಮೆ ಈ ವಿಚಾರಗಳು ಚರ್ಚೆಗೆ ಗ್ರಾಸವಾಗಲಿದೆ. ಈ ವಿಷಯಗಳು ಚುನಾವಣೆಯಲ್ಲಿ ಜನರ ಮುಂದೆ ತರುವುದಾಗಿ ಈಗಾಗಲೇ ಕೆಲವು ಮುಖಂಡರು ಹೇಳಿಕೊಂಡಿದ್ದಾರೆ.

29ಕ್ಕೆ ಚುನಾವಣೆ, 31ಕ್ಕೆ ಮತ ಎಣಿಕೆ: ಮೇ.ಒಂಭತ್ತಕ್ಕೆ ಚುನಾವಣಾ ಅಧಿಸೂಚನೆ ಹೊರಡಲಿದ್ದು, ಮೇ.16 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ, ಮೇ.17 ರಂದು ನಾಮಪತ್ರ ಪರಿಶೀಲನೆ, ಮೇ.20 ನಾಮ ಪತ್ರ ಹಿಂಪಡೆಯಲು ಕೊನೆಯ ದಿನ, ಮೇ.29 ರಂದು ಮತದಾನ, ಮರು ಮತದಾನ ಅಗತ್ಯವಿದ್ದಲಿ ಮೇ.30ರಂದು ನಡೆಯಲಿದ್ದು ಮೇ.31 ರಂದು ಮತ ಎಣಿಕೆ ನಡೆಯಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
180

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು