News Karnataka Kannada
Friday, April 26 2024
ಕರಾವಳಿ

ಸ್ವಯಂ ಸೇವಕರಲ್ಲಿ ಸೇವಾಮನೋಭಾವ ಇರಬೇಕು: ವೀರೇಂದ್ರ ಹೆಗ್ಗಡೆ

Photo Credit :

ಸ್ವಯಂ ಸೇವಕರಲ್ಲಿ ಸೇವಾಮನೋಭಾವ ಇರಬೇಕು: ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಸ್ವಯಂ ಸೇವಕರು ಧೈರ್ಯ, ತ್ಯಾಗ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವ ಹೊಂದಿದ್ದು, ಸ್ವಯಂ ಸ್ಪೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು ಹಾಗೂ ಸಿದ್ಧರಾಗಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಸೋಮವಾರ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಹಭಾಗಿತ್ವದಲ್ಲಿ ಆಯೋಜಿಸಿದ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ಮತ್ತು ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ತಕ್ಷಣ ಸ್ಪಂದಿಸಬೇಕು. ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆಗೆ ನೆರವಾಗಬೇಕು. ಪ್ರಜ್ಞಾವಂತರಾಗಿ ತಾವೂ ಬದುಕಿ, ಇತರರೂ ಬದುಕಲು ನೆರವಾಗುವುದು ಮಾನವಧರ್ಮವಾಗಿದೆ. ಆಪತ್ತು ನಿರ್ವಹಣೆ ಮಾಡಲು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ವೈಜ್ಞಾನಿಕವಾಗಿ ಶಿಸ್ತು ಬದ್ಧವಾಗಿ ವಿಪತ್ತು ನಿರ್ವಹಣೆ ಸ್ವಯಂ ಸೇವಕರಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಾಗಿದೆ. ರಕ್ಷಣಾ ಪರಿಕರಗಳ ಸಮರ್ಪಕ ಬಳಕೆ ಬಗ್ಯೆಯೂ ಅವರಿಗೆ ಮಾಹಿತಿ ನೀಡಲಾಗುವುದು. ಸ್ವಯಂ ಸೇವಕರು ತಮ್ಮ ಮನೆಯವರಿಗೂ, ನೆರೆಕರೆಯವರಿಗೂ ವಿಪತ್ತು ನಿರ್ವಹಣೆ ಬಗ್ಯೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸೂಕ್ತ ತರಬೇತಿಯಿಂದ ಸ್ವಯಂ ಸೇವಕರು ಉತ್ತಮ ರೀತಿಯ ಸೇವೆ ನೀಡಲು ಅನುಕೂಲವಾಗುತ್ತದೆ. ಕಳೆದ ಬಾರಿ ತಾಲೂಕಿನಲ್ಲಿ ಆದ ಅನಾಹುತದಿಂದಾಗಿ ಇಲ್ಲಿ ಇಂತಹ ತಂಡವೊಂದು ಅನಿವಾರ್ಯವಾಗಿದೆ. ಎಲ್ಲವನ್ನೂ ಸರಕಾರ ಮಾಡಲು ಸಾಧ್ಯವಿಲ್ಲ. ಜನರ ಸಹಭಾಗಿತ್ವವೂ ಅಗತ್ಯ ಎಂದ ಅವರು ಧರ್ಮಸ್ಥಳ ಕ್ಷೇತ್ರದಿಂದ ಆಡಳಿತಕ್ಕೆ ಎಲ್ಲಾ ಸಂದರ್ಭದಲ್ಲೂ ಸಂಪೂರ್ಣ ಸಹಕಾರ ಮತ್ತು ಕೊಡುಗೆಯನ್ನು ನೀಡಿರುವುದನ್ನು ಅವರು ಸ್ಮರಿಸಿದರು. 

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್. ಮಂಜುನಾಥ್ ಪ್ರಾಸ್ತಾವಿಕ ರಾಜ್ಯದ 55 ಸೂಕ್ಷ್ಮ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗುವುದು ಎಂದರು.

ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್‍ಲಾಲ್ ಮೀನಾ, ಮಂಗಳೂರು ಘಟಕದ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.

ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಬೂದಪ್ಪ ಗೌಡ ಧನ್ಯವಾದವಿತ್ತರು. ಉಪನ್ಯಾಸಕ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

 

ಮುಖ್ಯಾಂಶಗಳು:

  • ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ 55 ಸೂಕ್ಷ್ಮ ಪ್ರದೇಶಗಳಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ತರಬೇತಿ ನೀಡಲಾಗುವುದು.
  • ಪ್ರಥಮವಾಗಿ ಬೆಳ್ತಂಗಡಿ ತಾಲ್ಲೂಕಿನ 200 ಸ್ವಯಂ ಸೇವಕರ ತಂಡ ಸೋಮವಾರ ಧರ್ಮಸ್ಥಳದಲ್ಲಿ ಉದ್ಘಾಟನೆಗೊಂಡಿತು.
  • ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್‍ಲಾಲ್ ಮೀನಾ ವಿಪತ್ತು ನಿರ್ವಹಣೆ ಹಾಗೂ ಪರಿಕರಗಳ ಬಳಕೆ ಬಗ್ಗೆ ತರಬೇತಿ ನೀಡಿದರು.
  • ಸ್ವಯಂ ಸೇವಕರಿಗೆ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು.
  • ನೇತ್ರಾವತಿ ಸ್ನಾನಘಟ್ಟದಲ್ಲಿ ವಿಪತ್ತು ನಿರ್ವಹಣೆ ಬಗ್ಯೆ ಪ್ರಾತ್ಯಕ್ಷಿಕೆ ನಡೆಯಿತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು