ಬಂಟ್ವಾಳ: ಪ್ರೀತಿ ಮತ್ತು ಸೇವೆ ಇದು ಕ್ರೈಸ್ತ ಧರ್ಮದ ಆಧಾರ ಸ್ಥಂಭವಾಗಿದ್ದು, ಏಸುಕ್ರಿಸ್ತನ ಆಶಯದಂತೆ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದ್ದಾರೆ.
ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧೀನಕ್ಕೆ ಒಳಪಟ್ಟ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಆಸ್ಪತ್ರೆಯ ಹೊಸ ಅಂತಸ್ತುಗಳ ಮತ್ತು ಸೇವಾ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಭಾಗ್ಯ ಎಲ್ಲರಿಗೂ ಸಿಗಬೇಕು, ಹಾಗಾಗಿ ಆರೋಗ್ಯ ಸೇವೆ ನೀಡುವ ಕಾರ್ಯ ನಡೆಸುತ್ತಿದ್ದೇವೆ ಎಂದ ಅವರು, ಮಂಗಳೂರಿನ ಆಸ್ಪತ್ರೆಯಲ್ಲಿ ನೂರಾರು ಹಾಸಿಗೆಗಳನ್ನು ಬಡವರ ಆರೈಕೆಗಾಗಿ ಉಚಿತವಾಗಿ ನೀಡಲಾಗಿದೆ, ಮಂಗಳೂರು ನಗರದ ಕೇಂದ್ರ ಭಾಗದ ಜೊತೆಯಲ್ಲಿ ಗ್ರಾಮಾಂತರ ಪ್ರದೇಶದ ಜನರಿಗೂ ಆರೋಗ್ಯ ಭಾಗ್ಯ ನೀಡುವ ಉದ್ದೇಶದಿಂದ ತುಂಬೆ ಆಸ್ಪತ್ರೆ ಕಾರ್ಯಾಚರಿಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಮಂಗಳೂರು ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಉದ್ಘಾಟನೆ ನೆರವೇರಿಸಿದರು. ಅವರು ಮಾತನಾಡಿ, ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕ್ರೈಸ್ತಸಮುದಾಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೇವೆಯ ನಿಜವಾದ ಅರ್ಥವನ್ನು ಸಾಕಾರಗೊಳಿಸುತ್ತಿದೆ ಎಂದರು. ಮಾನಸಿಕ ಹಾಗೂ ಕುಷ್ಠರೋಗಿಗಳ ಶುಶ್ರೂಷೆಗೆ ವಿಶೇಷ ವಿಭಾಗವನ್ನೇ ಹೊಂದಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಜಿಲ್ಲೆಯ ಜನತೆಗೆ ಉತ್ತಮ ವೈದ್ಯಕೀಯ ಸೇವೆ ನೀಡುವಲ್ಲಿ ಸಫಲವಾಗಿದೆ ಎಂದರು.
ಬಂಟ್ವಾಳ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆಸ್ಪತ್ರೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಮಂಗಳೂರು ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ರಿಚರ್ಡ್ ಕುವೆಲ್ಲೋ, ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ರುಡಾಲ್ಫ್ ಡೇಸಾ, ತುಂಬೆ ಫಾ.ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಿರಣ್ ಶೆಟ್ಟಿ ವೇದಿಕೆಯಲ್ಲಿದ್ದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ಫಾ.ಪ್ಯಾಟ್ರಿಕ್ ರೊಡ್ರಿಗಸ್ ಸ್ವಾಗತಿಸಿ, ತುಂಬೆ ಆಸ್ಪತೆಯ ಆಡಳಿತಾಧಿಕಾರಿ ಫಾ.ರೋಶನ್ ಕ್ರಾಸ್ತಾ ವಂದಿಸಿದರು. ನರ್ಸಿಂಗ್ ವಿಭಾಗದ ಅಧೀಕ್ಷಕಿ ಶಾಲಿನಿ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.