ಮಂಗಳೂರು: ಜೈಲಿನೊಳಗೆ ನಡೆದ ಎರಡು ಗುಂಪಿನ ನಡುವೆ ಮಾರಾಮಾರಿಯಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳು ಹತ್ಯೆಯಾಗಿರುವ ಘಟನೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಸಬ್ ಜೈಲಿನಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೈದಿ ಗಣೇಶ್ ಶೆಟ್ಟಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಚಚರ ಮಾಡೂರು ಯೂಸುಫ್ ಕೊಲೆಯಾದವರು. ಬೆಳಗ್ಗಿನ ಉಪಹಾರದ ಸಂದರ್ಭ ಎರಡು ತಂಡಗಳ ನಡುವೆ ಜಗಳ ಆರಂಭವಾಗಿತ್ತು. ನಂತರ ಘರ್ಷಣೆ ಜೋರಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಘಟನೆಯಲ್ಲಿ ಆರು ಮಂದಿ ಕೈದಿಗಳು ಗಾಯಗೊಂಡಿದ್ದು, ಅವರನ್ನೆಲ್ಲಾ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ. ಕುಖ್ಯಾತ ಭೂಗತ ಪಾತಕಿ ವಿಕಿ ಶೆಟ್ಟಿ ಸಹಚರನಾಗಿರುವ ಕೈದಿ ಆಕಾಶ್ ಭವನ್ ಶರಣ್ ತಂಡದ ಕೈದಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕೈದಿಗಳಿಗೆ ಮಾರಾಕಾಸ್ತ್ರ ಹೇಗೆ ಕೈಗೆ ಸಿಕ್ಕಿತ್ತು ಎಂಬ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ತಿಳಿಸಿದ್ದಾರೆ.