ಮೂಡುಬಿದರೆ: ಟಾಸ್ ಸ್ಪೋಟ್ಸ್ ಕ್ಲಬ್ ವತಿಯಿಂದ 9ನೇ ವರ್ಷದ ಫ್ರೀ ಸ್ಟೈಲ್ ಈಜು ಸ್ಪರ್ಧೆಯನ್ನು ಭಾನುವಾರ ಜಂಗಮ ಮಠದ ಕೆರೆ ಬಳಿ ಆಯೋಜಿಸಲಾಗಿತ್ತು.
ಅಲಂಗಾರಿನ ಉದ್ಯಮಿ ಮಹಮ್ಮದ್ ಆಲಿ ಸ್ಪರ್ಧೆಗೆ ಚಾಲನೆ ನೀಡಿ, ದೈಹಿಕ ಹಾಗೂ ಮಾನಸಿಕವಾಗಿ ಸುದೃಢತೆಗೆ ಯೋಗ ಹಾಗೂ ಈಜು ಸಹಕಾರಿ. ಆದರೆ ಶಾಲಾ ಕಾಲೇಜುಗಳಲ್ಲಿ ಈಜು ಕಲಿಕೆ ಹಾಗೂ ಅದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಪರ್ಧೆಗಳು ನಡೆಯದೇ ಇರುವುದು ದುರಾದೃಷ್ಟಕರ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಕಳೆದ 8 ವರ್ಷಗಳಿಂದ ಅವಕಾಶ ಕಲ್ಪಿಸುತ್ತಿರುವುದು ನಿಜವಾಗಿಯೂ ಮಾದರಿ ಕೆಲಸ. ಐತಿಹಾಸಿಕ ಹಾಗೂ ನೈಸರ್ಗಿಕವಾದ ಮಠದ ಕೆರೆಯಲ್ಲಿ ಈಜು ಸ್ಪರ್ಧೆಯನ್ನು ಏರ್ಪಡಿಸಿರುವುದು ಕೂಡ ವಿಶಿಷ್ಟ ಪ್ರಯತ್ನ ಎಂದರು.
ಪ್ರವೀಣ್ ಪ್ರಭು ಅವರು ಕೈಯಲ್ಲಿ ತೆಂಗಿನ ಕಾಯಿ ಒಡೆಯುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳುವಾಯಿ ಮಠದ ಕೆರೆಯು ಶೇ.70ರಷ್ಟು ಅಭಿವೃದ್ಧಿ ಕಂಡಿದ್ದು, ಸುರಕ್ಷತೆ ಹಾಗೂ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಎರಡು ವರ್ಷದಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದರು.
ಸ್ಪರ್ಧೆಯ ಸಂಯೋಜಕ ಬಿ.ಎಂ ಸಿದ್ಧಿಕ್ ಅಲಂಗಾರು ಪ್ರಾಸ್ತಾವಿಕವಾಗಿ ಮಾತನಾಡಿ, 6 ವರ್ಷ ಕಡಲಕೆರೆ ನಿಸರ್ಗಧಾಮದ ಕೆರೆ ಹಾಗೂ ಕಳೆದ 3 ವರ್ಷದಿಂದ ಮಠದ ಕೆರೆಯಲ್ಲಿ ಆಯೋಜಿಸುತ್ತಿರುವ ಟಾಸ್ ಈಜು ಸ್ಪರ್ಧೆಯು ಮುಂದಿನ ವರ್ಷ ದಶಮಾನೋತ್ಸವದ ಸಂಭ್ರಮದಲ್ಲಿದೆ. ಇದನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ಮುಂದಿನ ವರ್ಷದ ಸ್ಪರ್ಧೆಯಲ್ಲಿ ವಿವಿಧ ಶೈಲಿಯ ಈಜು ಸ್ಪರ್ಧೆಗಳನ್ನು ಆಯೋಜಿಸುವ ಚಿಂತನೆಯಿದೆ ಎಂದರು.
ರೋಟರಿ ಕ್ಲಬ್ ಮೂಡುಬಿದರೆ ಮಿಡ್ ಟೌನ್ ನಿರ್ದೇಶಕ ಪುಷ್ಪರಾಜ್ ಜೈನ್, ಅಧ್ಯಕ್ಷ ಕೆ.ಪ್ರತಾಪ್ ಕುಮಾರ್, ಬೆಳುವಾಯಿ ಪಿಡಿಒ ಭೀಮಾ ನಾಯ್ಕ್, ಬಂಗ್ಲೆ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ಶೆಟ್ಟಿ, ಉದ್ಯಮಿಗಳಾದ ಮೆಲ್ವಿನ್ ಲೋಬೋ, ಶಂಕರ್ ಶೆಟ್ಟಿ, ಈಜು ತರಬೇತುದಾರ ಡಾ.ಗಣೇಶ್ ಆಚಾರ್ಯ, ನಿವೃತ್ತ ಜಲಾಂತರ್ಗಾಮಿ ಜಯ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಟಾಸ್ ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ವಿಶ್ವಾಸ್ ಅಲಂಗಾರ್, ಉಪಾಧ್ಯಕ್ಷ ರವಿಶಂಕರ್ ರಾವ್, ಕಾರ್ಯದರ್ಶಿ ಪ್ರಕಾಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.