ಮೂಡುಬಿದರೆ: ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಸ್ಪಂದನೆ ಮಾಡದ ಸಚಿವರು, ಇದೀಗ ಪ್ರಶಾಂತನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು ಕಿಡಿಗೇಡಿ ಎಂದು ಕರೆದಿದ್ದಾರೆ. ಮೂಲ್ಕಿಯಲ್ಲಿ ಆಟೋಚಾಲಕ, ಬನ್ನಡ್ಕದ ಲಕ್ಷ್ಮಣ್ ಎಂಬವರ ಮೇಲೆ ಹಲ್ಲೆ ನಡೆಸಿದ ಅಭಯರು ಕಿಡಿಗೇಡಿಯೆ ಹೊರತು ಪ್ರಶಾಂತನಲ್ಲ ಎಂದು ಮೂಡುಬಿದರೆ ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಶಾಂತನ ಮೇಲೆ 20ಕ್ಕೂ ಅಧಿಕ ಕೇಸುಗಳಿವೆ ಎಂದು ಹೇಳಿರುವ ಅಭಯರು ಅದನ್ನು ದಾಖಲೆ ಸಹಿತ ಸ್ಪಷ್ಟಪಡಿಸಲಿ. ದೇಶದ್ರೋಹಿಗಳನ್ನು ಸಚಿವರು ರಕ್ಷಣೆ ಮಾಡಿ, ಅಧಿಕಾರ ದುರುಪಯೋಗ ಮಾಡುತ್ತಿಲ್ಲ ಎಂಬುವುದಕ್ಕೆ ಖಾತ್ರಿಯೇನು? ಎಂದು ಸೋಮನಾಥ್ ಕೋಟ್ಯಾನ್ ಪ್ರಶ್ನಿಸಿದ್ದಾರೆ.
ಪ್ರಶಾಂತ ಕುಟುಂಬ ಆಸ್ತಿ ಬಗ್ಗೆ ಕೇವಲವಾಗಿ ಮಾತನಾಡಿರುವ ಸಚಿವ ಅಭಯಚಂದ್ರ ಜೈನ್ ತಾವು ಶಾಸಕನಾಗುವ ಮೊದಲು ಅಮೇಲೆ ಗಳಿಸಿರುವ ಆಸ್ತಿ ವಿವರಗಳನ್ನು ಬಹಿರಂಗಪಡಿಸಲಿ. ಎಲ್ಲ ಧರ್ಮದವರ ಮತವನ್ನು ಪಡೆದ ತಾವು ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿರುವುದು ಸರಿಯಲ್ಲ. ದುಃಖತಪ್ತ ಪ್ರಶಾಂತ್ ಕುಟುಂಬದ ಮೇಲೆ ಗೂಬೆ ಕೂರಿಸಿ, ತಂದೆ ತಾಯಿಯನ್ನು ಮತ್ತಷ್ಟು ಜರ್ಜರಿತಗೊಳಿಸುತ್ತಿರುವ ಅಭಯಚಂದ್ರ ಜೈನ್ ಬಹಿರಂಗವಾಗಿ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದರು. ಬಜರಂಗದಳ ಮುಖಂಡರಾದ ಭರತ್ ಶೆಟ್ಟಿ ಇರುವೈಲು, ಸುನೀಲ್ ಇರುವೈಲ್, ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.