ಕಾರ್ಕಳ: ಸಾಲ್ಮರ್ ಅಂಗಡಿಯೊಂದರಲ್ಲಿ ಸಾಮಾಗ್ರಿ ಖರೀದಿಸಲು ಬಂದಿದ್ದ ಯುವಕನೊಬ್ಬ ಮಹಿಳೆಯೊಬ್ಬರನ್ನು ಅಚಾನಕ್ ಆಗಿ ತಾಗಿದು ಇದೇ ಕಾರಣವನ್ನು ಮುಂಡಿಟ್ಟುಕೊಂಡು ಠಾಣೆಗೆ ಕರೆದೊಯ್ದ ಪೊಲೀಸರು ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾಘವೇಂದ್ರ ಎಂಬಾತ ಸುದ್ದಿಯ ಕೇಂದ್ರಬಿಂದುವಾಗಿದ್ದಾನೆ. ಮನೆಗೆ ಸಾಮಾಗ್ರಿ ಸಾಗಿಸುತ್ತಿದ್ದಾಗ ಅಂಗಡಿ ಮುಂದೆ ನಿಂತುಕೊಂಡಿದ್ದ ಮಹಿಳೆಗೆ ತಾಗಿದ ಎಂದು ತಿಳಿದುಬಂದಿದೆ. ಯುವಕ ವರ್ತನೆಯಿಂದ ಕಿರಿಕಿರಿಗೊಳಗಾದ ಮಹಿಳೆ ತನ್ನ ಪಕ್ಕದಲ್ಲಿ ನಿಂತುಕೊಂಡಿದ್ದ ಪೊಲೀಸ್ ಅಧಿಕಾರಿಯಾಗಿರುವ ಪತಿಯಲ್ಲಿ ತಿಳಿಸಿದ್ದಳು.
ಪತ್ನಿಯ ಮಾತಿನಿಂದ ಆಕ್ರೋಶ ಭರಿತಗೊಂಡ ಪೊಲೀಸ್ ಅಧಿಕಾರಿ ಸ್ಥಳದಲ್ಲಿ ಯುವಕನಿಗೆ ಎರಡು ಬಾರಿಸಿದಲ್ಲದೇ ಠಾಣೆಗೆ ಕರೆ ಮಾಡಿ ಜೀಪು ತರಿಸಿ ಅದರಲ್ಲಿ ಯುವಕನನ್ನು ಕೂಡಿ ಹಾಕಿ ಠಾಣೆಗೆ ಕರೆದೊಯ್ದಿದ್ದರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಠಾಣೆಯಿಂದ ಹೊರ ಬರುತ್ತಿದ್ದ ಯುವಕನಿಗೆ ನಡೆದಾಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾಗಿದೆಯಲ್ಲದೇ ಗುದದ ಭಾಗದಲ್ಲಿ ರಕ್ತ ಹೆಪ್ಪುಕಟ್ಟಿದೆ. ಕೈಯ ಮೂಳೆ ಮುರಿತಕ್ಕೊಳಗಾಗಿದೆ. ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ರಾಘವೇಂದ್ರ ಹೇಳಿಕೆಯೊಂದು ನೀಡಿ ಪೊಲೀಸರು ವಿನಾಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾನೆ.
ಸಮಾಜದ ಯುವಕ ರಾಘವೇಂದ್ರ ಅವರ ಮೇಲೆ ಪೊಲೀಸರು ನಡೆಸಿರುವ ಅಮಾನುಷ ಕೃತ್ಯವನ್ನು ದೇವಾಡಿಗ ಸಂಘದ ತಾಲೂಕು ಅಧ್ಯಕ್ಷ ರವಿಶಂಕರ್ ಶೇರಿಗಾರ್ ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಸಿದ್ದಾರೆ.