ಕಾಸರಗೋಡು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸಿಪಿಐಎಂ ನೇತೃತ್ವದ ಎಡರಂಗ ಮೇಲುಗೈ ಸಾಧಿಸಿದ್ದು, ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಗಮನಾರ್ಹ ಸಾಧನೆ ಮಾಡಿದೆ. ಜಿಲ್ಲಾ ಪಂಚಾಯತ್ ನಲ್ಲಿ ಎಡರಂಗ ಮತ್ತೆ ಅಧಿಕಾರದತ್ತ ಮುನ್ನುಗ್ಗುತ್ತಿದೆ.
ಆರು ಬ್ಲಾಕ್ ಪಂಚಾಯತ್ ಗಳ ಪೈಕಿ ನಾಲ್ಕರಲ್ಲಿ ಎಡರಂಗ ಹಾಗೂ ಎರಡರಲ್ಲಿ ಕಾಂಗ್ರೆಸ್ ನೇತ್ರತ್ವದ ಐಕ್ಯರಂಗ ಪಡೆದುಕೊಂಡಿದೆ. ಕಳೆದ ಬಾರಿ ತಲಾ ಮೂರು ಬ್ಲಾಕ್ ಪಂಚಾಯತನ್ನು ಉಭಯಪಕ್ಷಗಳು ಗೆದ್ದಿದ್ದವು. ನಗರಸಭೆಯಲ್ಲೂ ಐಕ್ಯರಂಗಕ್ಕೆ ಹಿನ್ನಡೆ ಉಂಟಾಗಿದೆ. ಮೂರು ನಗರಸಭೆಗಳ ಪೈಕಿ ಕಾಸರಗೋಡು ನಗರಸಭೆಯನ್ನು ಮಾತ್ರ ಐಕ್ಯರಂಗ ಗೆದ್ದುಕೊಂಡಿದೆ. ಕಾನ್ಚಾನ್ಗಾಡ್ ನಗರಸಭೆಯನ್ನು ಐಕ್ಯರಂಗದಿಂದ ಎಡರಂಗ ಕಸಿದುಕೊಂಡಿದೆ. ನೀಲೇಶ್ವರ ನಗರಸಭೆಯನ್ನು ಎಡರಂಗ ಉಳಿಸಿಕೊಂಡಿದೆ. 38 ಗ್ರಾಮ ಪಂಚಾಯತ್ ಗಳ ಪೈಕಿ ಐಕ್ಯರಂಗ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಗೆಲುವು ಸಾಧಿಸಿದೆ.
ಚೆಮ್ನಾಡ್, ಚೆಂಗಳ, ಮಂಗಲ್ಪಾಡಿ , ಬೇಡಡ್ಕ, ಕಳ್ಲಾರ್, ಕುಂಬ್ದಾಜೆ, ಕುಂಬಳೆ, ಮೀಂಜ, ಪಡನ್ನ, ವರ್ಕಾಡಿ ಮೊಗ್ರಾಲ್ ಪುತ್ತೂರಿನಲ್ಲಿ ಐಕ್ಯರಂಗ ಬಹುಮತ ಪಡೆದುಕೊಂಡಿದೆ. ಎಡರಂಗ ಪುತ್ತಿಗೆ, ದೇಲ೦ಪಾಡಿ, ಅಜಾನೂರು, ಕಯ್ಯೂರು, ಕಿನನೂರು ಕರಿನ್ದಲ, ಕುತ್ತಿಕೊಳು, ಮಡಿಕೈ, ಪಳ್ಳಿಕೆರೆ, ಪಿಲಿಕ್ಕೋಡ್, ಮೊದಲಾದ ಗ್ರಾಮ ಪಂಚಾಯತ್ ಗಳಲ್ಲಿ ಬಹುಮತ ಪಡೆದುಕೊಂಡಿದೆ . ಕಳೆದ ಭಾರಿ ಮೂರು ಗ್ರಾಮ ಪಂಚಾಯತ್ ಗೆದ್ದುಕೊಂಡಿದ್ದ ಬಿ ಜೆ ಪಿ ಐದಕ್ಕೂ ಅಧಿಕ ಪಂಚಾಯತ್ ಗಳಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಈ ಪೈಕಿ ಮಧೂರು ಮತ್ತು ಬೆಳ್ಳೂರಿನಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ . ಮೂರು ಗ್ರಾಮ ಪಂಚಾಯತ್ ನಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಎನ್ಮಕಜೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸಿಲ್ಲ. ಐಕ್ಯರಂಗ ಮತ್ತು ಬಿಜೆಪಿ ತಲಾ ಐದು ಸ್ಥಾನ ಗಳನ್ನು ಪಡೆದು ಕೊಂಡಿದೆ. ಎಡರಂಗ ಮೂರು ಸ್ಥಾನ ಪಡೆದುಕೊಂಡಿದೆ. ಪೈವಳಿಕೆ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ 8, ಎಡರಂಗ 7, ಐಕ್ಯರಂಗ 4 ಸ್ಥಾನ ಪಡೆದುಕೊಂಡಿದೆ.