ಮೂಡುಬಿದಿರೆ: 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು, 150 ಅಡಿ ಉದ್ದದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ದೇಶ ವಿದೇಶಗಳ 628 ಕಲಾವಿದರಿಂದ ಸಾಂಸ್ಕೃತಿಕ ವೈಭವ. ಪುತ್ತಿಗೆಪದವಿನ ವಿವೇಕಾನಂದ ನಗರದ ವನಜಾಕ್ಷಿ.ಕೆ ಶ್ರೀಪತಿ ಭಟ್ ಹೆಸರಿನ ವಿಶಾಲವಾದ ಬಯಲು ರಂಗಮಂದಿರದಲ್ಲಿ ನಡೆದ ಆಳ್ವಾಸ್ ದೀಪಾವಳಿ 2015 ಸಂಭ್ರಮವಿದು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಧಾರ್ಮಿಕ-ಸಾಂಸ್ಕೃತಿಕ ಉತ್ಸವ ತುಳುನಾಡಿನ ಪಾರಂಪರಿಕ ಆಚರಣೆಯೊಂದಿಗೆ ದೇಶಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತುಳುನಾಡಿನ ಪಾರಂಪರಿಕ ದೀಪಾವಳಿ ಆಚರಣೆಯನ್ನು ದೇಶ ವಿದೇಶದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ, ಮೂಡುಬಿದರೆ ಹಾಗೂ ಸುತ್ತಮುತ್ತಲಿನ ಊರಿನಿಂದ ಬಂದಂತಹ ಜನರ ಮುಂದೆ ಶಾಸ್ತ್ರಬದ್ದವಾಗಿ ಆಚರಿಸಲಾಯಿತು. ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ. ಮಿಜಾರುಗುತ್ತು ಮೋಹನ್ ಆಳ್ವ ಹಬ್ಬದುಡುಗೆಯಲ್ಲಿ ಗುರಿಕಾರರಾಗಿ ತುಳಸಿ ಪೂಜೆ,ಗೋಪೂಜೆ, ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ಆಯುದ ಪೂಜೆಗಳನ್ನು, ರೈತರ ಸಲಕರಣೆಗಳಿಗೆ ಪೂಜೆ ಸಲ್ಲಿಸಿದರು. ಆಳ್ವಾಸ್ ಶಾಲೆಯ 600ಕ್ಕೂ ಅಧಿಕ ವಿದ್ಯಾರ್ಥಿನಿಯರು ಸಂಪ್ರಾದಾಯಿಕ ಉಡುಗೆಯಲ್ಲಿ ವಿಶಾಲ ವೇದಿಕೆ ಮುಂದೆ ನಿಂತು ಕಲಾಸಕ್ತರನ್ನು ಸ್ವಾಗತಿಸಿದರು.
ಜ್ಯೋತಿಷಿ ಕಬಿಯಾಡಿ ಜಯರಾಮ್ ಆಚಾರ್ಯ ದೀಪಾವಳಿ ಕುರಿತು ಮಾತನಾಡಿದರು. ನವನೀತ್ ಶೆಟ್ಟಿ ಕದ್ರಿ ಬಲೇಂದ್ರ ಪೂಜೆ ವೈಶಿಷ್ಟತೆಯ ಕುರಿತು ಮಾತನಾಡಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಉದಯ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
ದೀಪಾವಳಿ ಧಾರ್ಮಿಕ ಕಾರ್ಯಕ್ರಮಗಳು ತುಳುನಾಡಿನ ಪರಂಪರೆಯಂತೆ ನಡೆದರೆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ದೇಶಿಯ ಸಾಂಸ್ಕೃತಿಕ ಅನಾವರಣಗೊಳಿಸಿತು. ಮೋಹಿನಿಯಾಟ್ಟಂ(60 ಕಲಾವಿದರು), ಕಾಳಿಂಗ ನರ್ತನ ಭರತನಾಟ್ಯ ನೃತ್ಯ ರೂಪಕ(35), ಅಂಧ್ರದ ಬಂಜಾರ ನೃತ್ಯ(60), ಗುಜರಾತಿನ ದಾಂಡಿಯ(60), 80 ಜನ ಕಲಾವಿದರಿಂದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, 55 ಕಲಾವಿದರಿಂದ ಬಡಗಿನ ರಾಸಲೀಲೆ ಯಕ್ಷ ಪ್ರಯೋಗ, 30 ಜನ ಕಲಾವಿದರಿಂದ ಸ್ಟಿಕ್ ಡಾನ್ಸ್, ದೋಲ್ ಚಲಂ, 60ಜನ ಕಲಾವಿದರಿಂದ 30 ಸಿಂಹಗಳ ಮುಖವಾಡಗಳೊಂದಿಗೆ ಪುರುಲಿಯೋ, 80 ಮಂದಿ ಯೋಗಪಟುಗಳಿಂದ ಯೋಗ ಪ್ರದರ್ಶನ, 60 ಜನ ಕಲಾವಿದರಿಂದ ಮಲ್ಲಕಂಬ ಪ್ರದರ್ಶನ 4 ಗಂಟೆಗಳ ಕಾಲ ಸಾಂಸ್ಕೃತಿಕ ಸಿಂಚನ ನೀಡಿತು.
ಇಂಡಿಯನ್ ಗಾಟ್ ಟ್ಯಾಲೆಂಟ್ ವಿಜೇತ ಮುಂಬೈ ತಂಡದಿಂದ ನೃತ್ಯ ವೈವಿಧ್ಯಮ ಪಂಜಾಬಿ ಕಲಾವಿದರಿಂದ ಸಾಹಸಮಯ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.