ಮೂಡುಬಿದಿರೆ: ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ. ಕುಡಿಯಲು ನೀರು ಬೇಕು ಎನ್ನುವ ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ್ದು ಸ್ಥಳಿಯಾಡಳಿತವಲ್ಲ, ಜನಪ್ರತಿನಿಧಿಗಳಲ್ಲ. ತಮ್ಮ ಸಾಮರ್ಥ್ಯ ಮೀರಿ, ಪರಿಶ್ರಮದ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದು ಪಣಪಿಲದ ಚಿಣ್ಣರು.
ದರೆಗುಡ್ಡೆ ಗ್ರಾ.ಪಂ., ಪಣಪಿಲ ಗ್ರಾಮದ 9 ಜನ ಮಕ್ಕಳು ಕೇವಲ ಎರಡೇ ದಿನದಲ್ಲಿ 18 ಅಡಿ ಆಳದ ಬಾವಿ ತೋಡಿ ನೀರು ತಂದ ಅಪರೂಪದ ಸಾಧನೆ ಮೆರೆದಿದ್ದಾರೆ. ಪಣಪಿಲದ ಗುಡ್ಡಲ್ ಪಲ್ಕೆ ಪ್ರದೇಶದ 10 ಮನೆಗಳಿಗೆ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆಯಿದ್ದು, ನಿವಾರಣೆಯಾಗಿಲ್ಲ. ಕಳೆದ ವರ್ಷದಿಂದ ಸ್ಥಳೀಯರು ಈ ಪ್ರದೇಶದಲ್ಲಿ ಬಾವಿ ತೋಡಬೇಕೆಂದು ಮೌಖಿಕವಾಗಿ ಹೇಳುತ್ತಿದ್ದರು. ಆದರೆ ಅದೂ ಕೈಗೂಡಲಿಲ್ಲ. ತಮ್ಮ ಏರಿಯಾದ ಜನರ ಸಂಕಷ್ಟವನ್ನು ಅರಿತ 9 ಮಂದಿ ಎಳೆಯರು ಬಾವಿ ತೋಡಲು ಮುಂದಾಗಿದ್ದರು. ಮೊದ ಮೊದಲು ಇದನ್ನು ನೋಡಿದ ಸ್ಥಳೀಯರು ಇದೇನು ಮಕ್ಕಳಾಟವೆಂದು ಹೇಳಿದುಂಟು. ಆದರೆ ಮಕ್ಕಳ ಪರಿಶ್ರಮ, ಕೆಲಸ ಮಾಡುವ ಸಂಭ್ರಮದಿಂದ ಬಾವಿ ತೋಡಿ ನೀರು ತೆಗೆದು ಸಾಧಿಸಿದ್ದಾರೆ.
15 ವರ್ಷದ ಪ್ರಸಾದ್, 9ನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಿತ್, ಕಿರಿಯರ ಹಿರಿಯೋಜನೆಯ ರೂವಾರಿಗಳು. ಇವರೊಟ್ಟಿಗೆ 7ನೇ ತರಗತಿಯ ದೀಕ್ಷಾ, 6 ತರಗತಿಯಲ್ಲಿ ಕಲಿಯುತ್ತಿರುವ ನಾಗೇಶ್, ಭವ್ಯ, 5ನೇ ತರಗತಿಯ ಸುಲೋಚನಾ, 4ನೇ ತರಗತಿ ಓದುತ್ತಿರುವ ದೀಕ್ಷಿತ್ ಹಾಗೂ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಹಾನ್ ಕೈಜೋಡಿಸಿ, ಬಾವಿ ತೋಡಿದವರು. ಎಂಟು ಮಂದಿ ಎಳೆಯರು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಬೋರುಗುಡ್ಡೆ ಹಾಗೂ ಅಳಿಯೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು.
ಸ್ಥಳೀಯರೊಬ್ಬರು ಈ ಜಾಗದಲ್ಲಿ ನೀರಿದೆ ಎಂದು ಹೇಳಿದನ್ನು ಸೂಕ್ಷ್ಮವಾವಾಗಿ ಗಮನಿಸಿ ಕಾರ್ಯರೂಪಕ್ಕೆ ತಂದಿದ್ದರೆ. ಈ ಎಳೆಯರು, ಕಳೆದ ಬಾನುವಾರ ಹಾಗೂ ದೀಪಾವಳಿ ರಜಾ ದಿನವಾದ ಮಂಗಳವಾರ ಬಾವಿ ತೋಡಿದ್ದರೆ. ಜೇಡಿ ಮಣ್ಣು ಇದ್ದ ಕಾರಣ ಮಕ್ಕಳ ಈ ಶ್ರಮದಾನಕ್ಕೆ ಅನುಕೂಲವಾಗಿದೆ. ಬಹುತೇಕ ಕೆಲಸ ಮುಗಿವ ಹಂತ, ನೀರು ಸಿಕ್ಕಿದ ಮೇಲೆ ಸ್ಥಳೀಯ ಹಿರಿಯರಿಬ್ಬರು ಈ ಕಿರಿಯರಿಗೆ ಕೈಜೋಡಿಸಿದ್ದಾರೆ.