ಉಳ್ಳಾಲ: ಬೋಳಿಯಾರ್ ಗ್ರಾಮದ ಜಳಕದಕಟ್ಟೆ ಎಂಬಲ್ಲಿ ಕೂಲಿ ಕಾರ್ಮಿಕ ಮಹಿಳೆಯೋರ್ವರು ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಕುರುವಿನಕೊಪ್ಪ ಸೌಂದತ್ತಿ ನಿವಾಸಿ ಅಶೋಕ್ ಮೊರಬದ ಎಂಬವರ ಪತ್ನಿ ಅನ್ನಪೂರ್ಣ(29) ಆಕೆಯ ಮಕ್ಕಳಾದ ಪರಶುರಾಮ (9) ಹಾಗೂ ತಾರಾ (10) ಆತ್ಮಹತ್ಯೆಗೆ ಶರಣಾದವರು. ಮೂರು ವಾರಗಳ ತನ್ನ ಪ್ರಿಯಕರ ಅಶೋಕ್ ಎಂಬಾತನ ಜೊತೆ ಬೋಳಿಯಾರ್ ಗೆ ಬಂದಿದ್ದ ಅವರು ಜಾರದಗುಡ್ಡ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಮಹಿಳೆ ಮಕ್ಕಳ ಜೊತೆ ಜಳಕದಕಟ್ಟೆ ನದಿಬಳಿ ಬಂದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಶನಿವಾರ ಬೆಳಗ್ಗೆ ಮೂವರ ಮೃತದೇಹ ಪತ್ತೆಯಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಗನ ಕಾಲನ್ನು ಮತ್ತು ಮಗಳ ಸೊಂಟಕ್ಕೆ ಶಾಲಿನಿಂದ ತನ್ನ ಸೊಂಟಕ್ಕೆ ಕಟ್ಟಿ ನದಿಗೆ ಹಾರಿದ್ದು ಕಂಡು ಬಂದಿದೆ. ಇದರಿಂದಾಗಿ ಮೂವರು ಮೃತದೇಹವೂ ಒಂದೇ ಕಡೆ ಜೊತೆಯಾಗಿಯೇ ಪತ್ತೆಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಪ್ರಿಯಕರ ಅಶೋಕ್ ನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಗಂಡ ಕೂಡು ಕುಟುಂಬ ಹೊಂದಿದ್ದು ಅವರ ಮನೆಯಲ್ಲಿ 30ರಷ್ಟು ಮಂದಿಯಿದ್ದಾರೆ. ಇದರಿಂದಾಗಿ ಜಗಳ ನಡೆಯುತ್ತಲೇ ಇತ್ತು. ದನ ಮೇಯಿಸುತ್ತಿದ್ದ ಮಹಿಳೆಗೆ ಕುರಿ ಮೇಯಿಸುವ ಕಾಯಕ ಮಾಡುತ್ತಿದ್ದ ಅಶೋಕ್ ನ ಪರಿಚಯ ಆರು ತಿಂಗಳ ಹಿಂದೆ ಆಗಿತ್ತು. ಈ ವಿಚಾರ ಗಂಡನಿಗೆ ತಿಳಿದು ಪ್ರತಿದಿನ ಜಗಳ ಆಗುತ್ತಿದ್ದುದಲ್ಲದೆ, ಇಬ್ಬರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಹೆದರಿ ಮೂರು ತಿಂಗಳ ಹಿಂದೆ ಊರು ಬಿಟ್ಟು ಮಂಗಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದೆವು. ಮೂರು ವಾರಗಳ ಹಿಂದೆ ಬೋಳಿಯಾರ್ ಗೆ ಬಂದಿದ್ದೆವು. ನಾಲ್ಕು ದಿನಗಳಿಂದ ಮಹಿಳೆಯೋರ್ವರೇ ಸಂಜೆ ಹೊತ್ತು ನದಿಯತ್ತ ಹೋಗಿ ಬರುತ್ತಿದ್ದು, ಶುಕ್ರವಾರ ಬೆಳಗ್ಗೆ ಮಕ್ಕಳ ಜೊತೆ ಹೋಗಿದ್ದರು ಎಂದು ಪ್ರಿಯಕರ ಅಶೋಕ್ ತಿಳಿಸಿದ್ದಾನೆ.
ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿಡಲಾಗಿದೆ. ಪ್ರಿಯಕರ ಅಶೋಕ್ ನೀಡಿದ ಮಾಹಿತಿ ಹಾಗೂ ಆಧಾರ್ ಕಾರ್ಡ್ ನಲ್ಲಿದ್ದ ವಿಳಾಸದ ಆಧಾರದಲ್ಲಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.