ಕಾಸರಗೋಡು: ಪಯಸ್ವಿನಿ ನದಿಯ ಪರಪ್ಪ ಹೊಳೆಯಲ್ಲಿ ಮುಳುಗಿದ್ದ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ.
ಪರಪ್ಪ ಕೊಟ್ಯಾಡಿಯ ಮುಹಮ್ಮದ್ ಇಹತೀಶ್ ( 19) ಮೃತಪಟ್ಟವನು. ಪುತ್ತೂರು ಫಿಲೋಮಿನಾ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಯಾಗಿದ್ದನು. ರಜೆಯಾದುದರಿಂದ ಶನಿವಾರ ಮನೆಗೆ ಬಂದಿದ್ದ ಇಹತೀಶ್ ಸಂಜೆ ಮೂವರು ಸಹಪಾಟಿಗಳ ಜೊತೆ ಮನೆಯ ಅಲ್ಪ ದೂರದ ಪರಪ್ಪ ಹೊಳೆಗೆ ಸ್ನಾನಕ್ಕಿಳಿದಿದ್ದನು. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು ಜೊತೆಗಿದ್ದವರು ರಕ್ಷಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಸುದ್ದಿ ತಿಳಿದು ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ನಡೆಸಿದ್ದು, ರಾತ್ರಿ 12 ಗಂಟೆ ತನಕ ಶೋಧ ನಡೆಸಲಾಗಿತ್ತು. ಬಳಿಕ ಸ್ಥಗಿತಗೊಳಿಸಿದ್ದ ಶೋಧ ಕಾರ್ಯ ಇಂದು ಬೆಳಿಗ್ಗೆ ಆರಂಭಿಸಿದ್ದು, ಘಟನೆ ನಡೆದ ಸ್ಥಳದ ಕೆಲವೇ ದೂರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.