ಕಾಸರಗೋಡು: ಹಲವು ನಾಟಕೀಯ ಬೆಳವಣಿಗೆ ಕಂಡ ಕಾಸರಗೋಡು ಜಿಲ್ಲಾ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ಬಿಜೆಪಿ ಸದಸ್ಯರು ತಟಸ್ಥವಾಗಿ ನಿಂತ ಕಾರಣ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಅಧಿಕಾರ ಪಡೆಯಿತು.
ಐಕ್ಯರಂಗದಿಂದ ಸ್ಪರ್ಧಿಸಿದ್ದ ಮುಸ್ಲಿಂ ಲೀಗ್ ನ ಎಜಿಸಿ ಬಷೀರ್ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಷೀರ್ 8 ಮತಗಳನ್ನು ಪಡೆದರೆ ಸಿಪಿಎಂನ ವಿ.ಪಿ.ಪಿ ಮುಸ್ತಫಾ 7 ಮತಗಳನ್ನು ಗಳಿಸಿದರು. 17 ಸದಸ್ಯ ಬಲದಲ್ಲಿ ಬಹುಮತಕ್ಕೆ 9 ಮತಗಳು ಅಗತ್ಯ. ಆದರೆ ಐಕ್ಯರಂಗ 8 ಸ್ಥಾನಗಳನ್ನು ಗಳಿಸಿತ್ತು. ಇದರಿಂದ ಬಿಜೆಪಿ ನಿಲುವು ನಿರ್ಣಾಯಕವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಮನಬದಲಾಯಿಸಿದರಿಂದ ಐಕ್ಯರಂಗಕ್ಕೆ ಅದೃಷ್ಟ ಒಲಿಯಿತು.
ಐಕ್ಯರಂಗದ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಗೆ ಅಧ್ಯಕ್ಷ ಸ್ಥಾನ ನೀಡುವುದನ್ನು ವಿರೋಧಿಸುತ್ತಿರುವ ಬಿಜೆಪಿ ಮುಸ್ಲಿಂ ಲೀಗ್ ನ ಅಧ್ಯಕ್ಷ ಅಭ್ಯರ್ಥಿಯನ್ನು ಗೆಲ್ಲಿಸದಿರಲು ಸಿಪಿಎಂಗೆ ಮತಚಲಾಯಿಸಲು ಬಿಜೆಪಿ ಸದಸ್ಯರು ತೀರ್ಮಾನಿಸಿದ್ದರು. ಆದರೆ ಮತದಾನಕ್ಕೆ ಕೆಲವೇ ನಿಮಿಷದ ಮೊದಲು ಪಕ್ಷವು ತೀರ್ಮಾನ ತೆಗೆದುಕೊಂಡಿತು. ಒಪ್ಪಂದದಂತೆ ಐಕ್ಯರಂಗದ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಮೊದಲ ಎರಡೂವರೆ ವರ್ಷ ಹಾಗೂ ಬಳಿಕದ ಎರಡೂವರೆ ವರ್ಷ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ.
ಆಯ್ಕೆಯಾದ ಬಷೀರ್ ರವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿ ಪಿ.ಎಸ್ ಮುಹಮ್ಮದ್ ಸಗೀರ್ ಪ್ರಮಾಣ ವಚನ ಬೋಧಿಸಿದರು. ಬಷೀರ್ ಜಿಲ್ಲಾ ಪಂಚಾಯತ್ ನ ಕುಂಬಳೆ ಡಿವಿಜನ್ ನಿಂದ ಆಯ್ಕೆಯಾಗಿದ್ದರು.