ಕಾಸರಗೋಡು: ಜಿಲ್ಲೆಯ ಹಲವಡೆ ಶನಿವಾರ ರಾತ್ರಿಯಿಂದ ಕಿಡಿಗೇಡಿಗಳು ಬಸ್ಸು ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಬಹುತೇಕ ರೂಟ್ ಗಳಲ್ಲಿ ಬಸ್ಸು ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಕೆಲ ರೂಟ್ ಗಳಲ್ಲಿ ಇಂದು ಬೆಳಗ್ಗಿನಿಂದ ಖಾಸಗಿ ಬಸ್ಸುಗಳು ರಸ್ತೆ ಗಿಳಿದರೂ 10 ಗಂಟೆ ಸುಮಾರಿಗೆ ಸಂಚಾರ ಸ್ಥಗಿತಗೊಳಿಸಿದೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಬಸ್ಸುಗಳು ಏಕಾ ಏಕಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಇದರಿಂದ ಬೆಳಿಗ್ಗೆ ಪೇಟೆಗೆ ತಲುಪಿದ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡುವಂತಹ ಸ್ಥಿತಿ ಉಂಟಾಗಿದೆ. ಆದರೆ ಕಾಸರಗೋಡು-ಮಂಗಳೂರು ನಡುವೆ ಕೆಎಸ್ ಆರ್ ಟಿಸಿ ಬಸ್ಸುಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.
ಮಂಜೇಶ್ವರ, ಉಪ್ಪಳದಲ್ಲಿ ಶನಿವಾರ ರಾತ್ರಿ ಕೇರಳ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಒಂದು ಖಾಸಗಿ ಬಸ್ಸಿಗೂ ಕಲ್ಲೆಸೆಯಲಾಗಿದೆ. ಮಂಜೇಶ್ವರದಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೇರಳ ಸಾರಿಗೆ ಬಸ್ಸಿಗೆ ಬೈಕ್ ನಲ್ಲಿ ಬಂದ ಯುವಕರು ಕಲ್ಲೆಸೆದು ಪರಾರಿಯಾಗಿದ್ದಾರೆ.
ಚಾಲಕ ಅಬಿ ಕುಮಾರ್ (42) ಗಾಯಗೊಂಡಿದ್ದಾರೆ. ಉಪ್ಪಳದಲ್ಲಿ ಇನ್ನೊಂದು ಸಾರಿಗೆ ಸಂಸ್ಥೆ ಬಸ್ಸಿಗೆ ಕಲ್ಲೆಸೆಯಲಾಗಿದೆ. ಉಪ್ಪಳ ಕೈಕಂಬದಲ್ಲಿ ಮಾಲಕನ ಮನೆ ಮುಂಭಾಗದಲ್ಲಿ ನಿಲುಗಡೆಗೊಳಿಸಿದ್ದ ಖಾಸಗಿ ಬಸ್ಸಿಗೆ ತಡರಾತ್ರಿ ಕಿಡಿಗೇಡಿಗಳು ಕಲ್ಲೆಸೆದಿದ್ದು ಗಾಜು ಹುಡಿಯಾಗಿದೆ. ಗೋವಾದಿಂದ ಕೇರಳದ ಆಲಪುಯಕ್ಕೆ ಮೀನು ಹೇರಿಕೊಂಡು ತೆರಳುತ್ತಿದ್ದ ಲಾರಿಗೆ ಕಲ್ಲೆಸೆಯ ಲಾಗಿದ್ದು , ಚಾಲಕ ಬಾಬು (50) , ಕ್ಲೀನರ್ ಶಿಬು ( 36) ಗಾಯಗೊಂಡಿದ್ದಾರೆ. ಉಪ್ಪಳ ಪೆಟ್ರೋಲ್ ಬ್ಯಾಂಕ್ ಬಳಿ ಕೇರಳ ಸಾರಿಗೆ ಸಂಸ್ಥೆ ಬಸ್ಸಿಗೂ ಕಲ್ಲೆಸೆಯಲಾಗಿದೆ. ಬೈಕ್ ನಲ್ಲಿ ಬಂದ ತಂಡವು ಈ ಕೃತ್ಯ ನಡೆಸಲಾಗಿದೆ.
ಕಾಸರಗೋಡು ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಸಂಚಾರಕ್ಕೆ ತಡೆಯೊಡ್ಡಿದ ಘಟನೆಯೂ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು ಬಾಬರಿ ಮಸೀದಿ ಧ್ವಂಸ ದಿನವಾದ ಕಾಸರಗೋಡಿನಲ್ಲಿ ಅಹಿತಕರ ಘಟನೆ ನಡೆಸಲು ಕೆಲ ಕಿಡಿಗೇಡಿಗಳು ಹುನ್ನಾರ ನಡೆಸುತ್ತಿದ್ದು, ಪ್ರತಿ ವರ್ಷ ಉಪ್ಪಳ, ಮಂಜೇಶ್ವರ ಪರಿಸರದಲ್ಲಿ ಇಂತಹ ಕೃತ್ಯಗಳು ಮರುಕಳಿಸುತ್ತಲೇ ಇದೆ. ಇದರಿಂದ ಡಿ.6 ರಂದು ಪ್ರತಿ ವರ್ಷ ಅಘೋಷಿತ ಹರತಾಳಕ್ಕೂ ಕಾರಣವಾಗುತ್ತಿದೆ. ಖಾಸಗಿ ಬಸ್ಸುಗಳು ಏಕಾ ಏಕಿ ರಸ್ತೆಗೆ ಇಳಿಸದಿರುವುದು ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ.
ಬದಿಯಡ್ಕ ಠಾಣಾ ವ್ಯಾಪ್ತಿಯ ಮಾನ್ಯದಲ್ಲಿ ಆರಾಧನಾ ಕೇಂದ್ರದ ಮೇಲೆ ಟಯರ್ ಗೆ ಬೆಂಕಿ ಹಚ್ಚಿ ಎಸೆದ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.