ಮಂಗಳೂರು: ಇಲ್ಲಿನ ಹೊರವಲಯದ ಬೋಳಿಯಾರಿನಲ್ಲಿ ರಾತ್ರಿಯ ವೇಳೆ ಮನುಷ್ಯನಂತಿರುವ ವಿಚಿತ್ರ ಜೀವಿಯೊಂದು ಅಲೆದಾಡುತ್ತಿದ್ದು, ಇದರಿಂದ ಸ್ಥಳೀಯರಿಗೆ ರಾತ್ರಿ ವೇಳೆ ಸಂಚರಿಸಲು ಭಯ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.
ದಟ್ಟ ಅರಣ್ಯದಿಂದ ಕೂಡಿರುವ ಬೋಳಿಯಾರು ಪ್ರದೇಶದಲ್ಲಿ ಮನುಷ್ಯನಾಕೃತಿ ಹೊಂದಿರುವ ವಿಚಿತ್ರ ಜೀವಿಯೊಂದು ಭಯ ಹುಟ್ಟಿಸುವ ಧ್ವನಿಯೊಂದಿಗೆ ಬೊಬ್ಬೆ ಹಾಕುತ್ತ ಓಡಾಡುತ್ತಿದೆ. ಇದರಿಂದ ರಾತ್ರಿಯ ವೇಳೆ ಜನರಿಗೆ ಸಂಚರಿಸಲು ಹಿಂಜರಿಯುತ್ತಿದ್ದಾರೆ. ಒಬ್ಬಂಟಿಯಾಗಿ ಸಂಚರಿಸಿದರೆ ಅವರ ಹಿಂದೆಯೇ ಬಂದು ಹೆದರಿಸುತ್ತದೆ. ಕೆಲವರಿಗೆ ಮನುಷ್ಯನಂತೆ ಕಂಡು ಬಂದರೆ, ಕೆಲವರಿಗೆ ನಾಲ್ಕು ಕಾಲಿನ ಪ್ರಾಣಿಯಂತೆ ಸಂಚರಿಸುತ್ತಾ ವಿಚಿತ್ರವಾಗಿ ಆಡುತ್ತಿದೆ. ಅದನ್ನು ಹಿಡಿಯಲು ಹೋದರೆ ಒಮ್ಮಿಂದೊಮ್ಮೆಲೆ ಮಾಯವಾಗಿ ಬಿಡುತ್ತಿದೆ.
ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ರಾತ್ರಿ ಭಜನಾಮಂದಿರದಲ್ಲಿ ಭಜನೆ ಮುಗಿಸಿ ವಾಪಾಸ್ಸು ಬರುತ್ತಿರಬೇಕಾದರೆ ಹಿಂದಿನಿಂದ ಬೊಬ್ಬೆ ಹಾಕುತ್ತಾ ಬಂತು. ಮಹಿಳೆ ಭಯದಿಂದ ಓಡುತ್ತಾ ಮನೆಗೆ ಬಂದರೂ ಮನೆ ತನಕ ವಿಚಿತ್ರವಾಗಿ ಬೊಬ್ಬೆ ಹಾಕುತ್ತಾ ಮಹಿಳೆಯ ಹಿಂದಿನಿಂದ ಬಂದಾಗ ಮನೆಯವರೆಲ್ಲ ಹೊರಗಡೆ ಬಂದು ನೋಡಿದರೆ ಕಿರುಚುತ್ತಾ ಕಾಡಿನತ್ತ ಓಡಿ ಹೋಯಿತು. ಈ ವಿಚಿತ್ರ ಪ್ರಾಣಿಯಿಂದ ಅಲ್ಲಿನ ಜನರು ನಡೆದಾಡಲು ತುಂಬಾ ಭಯ ಪಡುತ್ತಿದ್ದಾರೆ. ಈ ವಿಚಿತ್ರ ಪ್ರಾಣಿಯನ್ನು ಹಿಡಿಯಬೇಕೆಂಬ ಹಟದಿಂದ ಅಲ್ಲಿನ ಸ್ಥಳೀಯ ಯುವಕರೆಲ್ಲಾ ಸೇರಿಕೊಂಡು ಪ್ರಾಣಿ ಬರುವುದನ್ನು ಕಾದು ಕುಳಿತರು. ರಾತ್ರೋ ರಾತ್ರಿ ಈ ಪ್ರಾಣಿ ಕಾಡಿನಿಂದ ಹೊರಬರುತ್ತಿರುವುದನ್ನು ಕಂಡ ಯುವಕರು ಟಾರ್ಚ್ ಹಾಕಿ ಹಿಡಿಯಲು ಮುಂದಾದಾಗ ಕಾಡಿನೊಳಗೆ ಕಣ್ಮರೆಯಾಗಿ ಬಿಟ್ಟಿತ್ತು. ದಿನಕ್ಕೊಂದು ರೀತಿಯಲ್ಲಿ ಕಾಣಸಿಗುವ ಈ ವಿಚಿತ್ರ ಪ್ರಾಣಿಯಿಂದ ಅಲ್ಲಿನ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.