ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಎರಡು ರಸ್ತೆಗಳು ಸಂದಿಸುವ ಸ್ಥಳದಲ್ಲಿ ವಾಹನಗಳಿಂದ ತ್ಯಾಜ್ಯ ವರ್ಗಾಯಿಸುವುದನ್ನು ಅಲ್ಲೇ ಸಮೀಪದ ಪೆಲೆತ್ತಿಮಾರ್ ಗೆ ಹೋಗುವ ರಸ್ತೆ ಬದಿಗೆ ಸ್ಥಳಾಂತರಿಸಲು ಬಂಟ್ವಾಳ ಪುರಸಭೆ ಸಿದ್ದತೆ ನಡೆಸುತ್ತಿರುವುದನ್ನು ಸಾರ್ವಜನಿಕರು ವಿರೋಧಿಸಿದ ಘಟನೆ ಬುಧವಾರ ನಡೆಯಿತು.
ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಬಂಟ್ವಾಳ ಹಾಗೂ ಧರ್ಮಸ್ಥಳಕ್ಕೆ ಸಂಪರ್ಕಿಸುವ ಎರಡು ರಸ್ತೆಗಳು ಸಂಧಿಸುವ ಸ್ಥಳದಲ್ಲಿ ತ್ಯಾಜ್ಯವನ್ನು ಟ್ರಾಕ್ಟರ್ ನಿಂದ ಲಾರಿಗೆ ವರ್ಗಾಯಿಸುವ ಕೆಲಸ ಕಳೆದ ಹಲವು ಸಮಯಗಳಿಂದ ನಡೆಯುತ್ತಿದೆ. ಆರಂಭದಲ್ಲಿ ತ್ಯಾಜ್ಯ ವರ್ಗಾವಣೆ ಮಾತ್ರ ಈ ಸ್ಥಳದಲ್ಲಿ ನಡೆಯುತ್ತದೆ ಎನ್ನುತ್ತಿದ್ದ ಪುರಸಭೆ ಬಳಿಕ ಅದೇ ಸ್ಥಳದಲ್ಲಿ ಮನೆ ಮನೆಗಳಿಂದ ಸಂಗ್ರಹಿಸಿ ತಂದ ಕಸವನ್ನು ರಾಶಿ ಹಾಕಿ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಇದೀಗ ಇದೇ ಸ್ಥಳದಲ್ಲಿ ಸಾರ್ವಜನಿಕ ಉದ್ಯಾನವನ ತಲೆ ಎತ್ತುತ್ತಿದ್ದು ನಗರದ ಅಂದಕ್ಕೆ ಕಸದ ರಾಶಿ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ವಾಹನಗಳಿಂದ ಕಸ ವರ್ಗಾವಣೆಯನ್ನು ಅಲ್ಲೆ ಸಮೀಪದ ಪೆಲತ್ತಿಮಾರ್ ಗೆ ಹೋಗುವ ರಸ್ತೆ ಬಳಿ ನಡೆಸಲು ಪುರಸಭೆ ಆಡಳಿತ ತೀರ್ಮಾನಿಸಿದ್ದು ಬುಧವಾರ ಬೆಳಿಗ್ಗೆ ಈ ಬಗ್ಗೆ ಸಿದ್ದತೆ ನಡೆಸುತ್ತಿದ್ದಂತೆಯೇ ಸ್ಥಳೀಯರು ಜಮಾಯಿಸಿ ಯಾವುದೇ ಕಾರಣಕ್ಕೂ ಇಲ್ಲಿ ಕಸ ವರ್ಗಾವಣೆ ಅಥವಾ ರಾಶಿ ಹಾಕಬಾರದು ಎಂದು ಒತ್ತಾಯಿಸಿದರು. ಈ ಬಗ್ಗೆ ಪುರಸಭಾ ಸದಸ್ಯರು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಸಾರ್ವಜನಿಕರು ತಮ್ಮ ನಿರ್ಧಾರ ಸಡಿಲಿಸಲು ಒಪ್ಪದೇ ಇದ್ದಾಗ ಪುರಸಭೆ ಪರ್ಯಾಯ ಸ್ಥಳ ಗುರುತಿಸಲು ಮುಂದಾಯಿತು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಸದಸ್ಯರಾದ ಸದಾಶಿವ ಬಂಗೇರಾ, ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಮಹಮ್ಮದ್ ನಂದರಬೆಟ್ಟು, ಎಂಜಿನಿಯರ್ ಡೊಮಿನಿಕ್ ಡಿಮಿಲ್ಲೋ, ಆರೋಗ್ಯಾಧಿಕಾರಿ ಪ್ರಸಾದ್, ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರಾ, ಮಚ್ಚೇಂದ್ರ ಸಾಲ್ಯಾನ್, ರವಿರಾಜ್ ಬಿ.ಸಿ.ರೋಡು ಮೊದಲಾದವರು ಸ್ಥಳದಲ್ಲಿ ಇದ್ದರು.