ಕಾಸರಗೋಡು: ತಿರುವನಂತಪುರದ ವ್ಯಾಪಾರಿಯನ್ನು ಅಪಹರಿಸಿ 2.45 ಲಕ್ಷ ರೂ. ನಗದು ಮತ್ತು 36 ಸಾವಿರ ರೂ. ಬೆಲೆ ಬಾಳುವ ವಾಚನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಕಾಸರಗೋಡು ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ದೇಳಿ ಉಲೂಜಿಯ ಸಿ.ಎ ಶಮೀರ್ (30) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಸಿ.ಎ ಶಮೀರ್ ಎರಡನೇ ಆರೋಪಿಯಾಗಿದ್ದಾನೆ. ಒಟ್ಟು ನಾಲ್ಕು ಮಂದಿ ಶಾಮೀಲಾಗಿದ್ದು, ಮಡಿಕೇರಿ ಸುಂಟಿಕೊಪ್ಪದ ಹಾರಿಸ್ (21) ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
2004 ರ ಡಿಸೆಂಬರ್ 16ರಂದು ಘಟನೆ ನಡೆದಿತ್ತು. ವಾಚ್ ಮಾರಾಟ ವ್ಯಾಪಾರಿಯಾಗಿದ್ದ ತಿರುವನಂತಪುರದ ನಿಜಾಂ ಎಂಬಾತನನ್ನು ವಾಚ್ ಖರೀದಿಸುವ ಆಮಿಷ ನೀಡಿ ಕಾಸರಗೋಡಿಗೆ ಬರುವಂತೆ ತಿಳಿಸಿದ್ದು, ಇದರಂತೆ ರೈಲಿನಲ್ಲಿ ಕಾಸರಗೋಡಿಗೆ ತಲುಪಿದ ನಿಜಾಂನನ್ನು ಕಾರಿಗೆ ಹತ್ತಿಸಿ ಹಾಸನಕ್ಕೆ ಕೊ೦ಡೊಯ್ದ ತಂಡವು ರಿವಾಲ್ವರ್ ತೋರಿಸಿ ಬೆದರಿಸಿ ಅವರ ಬಳಿ ಇದ್ದ ಹಣವನ್ನು ದರೋಡೆ ಮಾಡಿದ್ದರು. ಈ ಕುರಿತು ನಿಜಾಂ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.
ಹಾರಿಸ್ ನನ್ನು ಕೆಲ ದಿನದಲ್ಲೇ ಬಂಧಿಸಿದ್ದರೂ ಉಳಿದವರು ತಲೆಮರೆಸಿಕೊಂಡಿದ್ದರು. ಶಮೀರ್ ಇನ್ನೊಂದು ದರೋಡೆ ಪ್ರಕರಣದಲ್ಲೂ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.