ಉಳ್ಳಾಲ: ನೋಟೀಸು ನೀಡಿ ನಾಲ್ಕು ವಾರಗಳು ಕಳೆದರೂ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಅಂಗಡಿಗಳನ್ನು ಖಾಲಿ ಮಾಡದ ಹಿನ್ನೆಲೆಯಲ್ಲಿ ಬುಧವಾರ ಸಹಾಯಕ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಕ್ರೇನ್ ಮೂಲಕ ಆವರಣ ಗೋಡೆಗಳನ್ನು ತೆರವುಗೊಳಿಸುವ ಮೂಲಕ ಮುಂದಿನ ಸೋಮವಾರದ ಒಳಗೆ ಸಂಪೂರ್ಣ ಖಾಲಿ ಮಾಡುವಂತೆ ಗಡುವು ನೀಡಲಾಯಿತು.
ತೊಕ್ಕೊಟ್ಟು ಸಹರಾ ಆಸ್ಪತ್ರೆ ಎದುರುಗಡೆ ಇರುವ ಎರಡು ಕಾಂಪ್ಲೆಕ್ಸ್ ಗಳ ಆವರಣ ಗೋಡೆ, ಆರ್.ಈ.ಬಿ ಕಾಂಪ್ಲೆಕ್ಸ್ ಕಟ್ಟಡದ ಎದುರುಭಾಗದ ಆವರಣ ಗೋಡೆ ಮತ್ತು ಆಕ್ಸಿಸ್ ಬ್ಯಾಂಕಿನ ಖಾಲಿಯಿದ್ದ ಎಟಿಎಂ ಕಟ್ಟಡವನ್ನು ಜೆಸಿಬಿ ಮೂಲಕ ತೆರುವುಗೊಳಿಸುವ ಮೂಲಕ ಮನವರಿಕೆ ಮಾಡಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಆಯುಕ್ತ ಡಾ. ಅಶೋಕ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಕೊನೆ ಹಂತದಲ್ಲಿದ್ದರೂ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕಟ್ಟಡಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಕಾಮಗಾರಿಗೆ ಹಿನ್ನೆಡೆಯಾಗಿದೆ. ಇದರಿಂದ ತೊಕ್ಕೊಟ್ಟುವಿನಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗುತ್ತಿದ್ದು, ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. ಕಟ್ಟಡ ಮಾಲೀಕರಿಗೆ ಈಗಾಗಲೇ ಪರಿಹಾರ ಧನವನ್ನು ನೀಡಲಾಗಿದೆ. ನಾಲ್ಕು ವಾರಗಳಿಂದ ನೋಟೀಸನ್ನು ನೀಡಿ ತೆರವುಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೂ ತೆರವು ನಡೆಸದ ಹಿನ್ನೆಲೆಯಲ್ಲಿ ಇದೀಗ ತಡೆಗೋಡೆಗಳನ್ನು ತೆರವು ನಡೆಸುವ ಮೂಲಕ ಮನವರಿಕೆ ಮಾಡಲಾಗಿದೆ. ಸೋಮವಾರ ಬೆಳಗ್ಗಿನಿಂದ ಕಟ್ಟಡ ತೆರವು ಕಾರ್ಯಾಚರಣೆ ನಡೆಯಲಿದ್ದು, ಅದರೊಳಗೆ ಎಲ್ಲಾ ಅಂಗಡಿ ಮಾಲೀಕರು ಸೊತ್ತುಗಳನ್ನು ಖಾಲಿ ಮಾಡಬೇಕಾಗಿದೆ. ನಕ್ಷೆಯ ಪ್ರಕಾರ ರಾ.ಹೆ.66ರ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡಿರುವ ನವಯುಗ ಕಂಪೆನಿಯವರು ಬಹುತೇಕ ಪೂರ್ಣಗೊಳಿಸಿದ್ದು, ಕೊನೆಯ ಹಂತವಾಗಿ ತೊಕ್ಕೊಟ್ಟುವಿನಲ್ಲಿ ಫ್ಲೈಓವರ್ ಮತ್ತು ತಲಪಾಡಿಯಲ್ಲಿ ಟೋಲ್ ಬೂತ್ ಕಾಮಗಾರಿ ಮುಗಿಸುವ ಮೂಲಕ ಪೂರ್ಣಗೊಳ್ಳಲಿದೆ. ತೊಕ್ಕೊಟ್ಟುವಿನಲ್ಲಿ ಕಾಮಗಾರಿ ವೇಳೆ ಸರ್ವೀಸ್ ರಸ್ತೆಯ ಅಗತ್ಯವಿರುವುದರಿಂದ ಶೀಘ್ರವೇ ತೆರವುಗೊಳಿಸಬೇಕಿದ್ದು, ಎರಡು ಬದಿಗಳಲ್ಲಿ 30 ಮೀ ಅಗಲಕ್ಕೆ ಕಾಮಗಾರಿ ನಡೆಯಲಿದೆ ಎಂದರು.