ಕಾಸರಗೋಡು: ಕಬಡ್ಡಿ ಆಟಗಾರ ನೀಲೇಶ್ವರದ ಜಿ.ಸಂತೋಷ್ ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿಯನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಕೆ.ವಿ ರಂಜೂಷಾ (30) ಎಂದು ಗುರುತಿಸಲಾಗಿದೆ. ಈಕೆ ಕೊಲೆಗೆ ಸಂಚು ನಡೆಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮನೋಜ್ ಮತ್ತು ಈಕೆಯ ಮೊಬೈಲ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ರಂಜೂಷಾಳ ಕೃತ್ಯ ಬೆಳಕಿಗೆ ಬಂದಿದ್ದು, ಈಕೆಯನ್ನು ವಿಚಾರಣೆಗೆ೦ದು ಪೊಲೀಸ್ ಠಾಣೆಗೆ ಕರೆಸಿ ಬಳಿಕ ಬಂಧಿಸಲಾಯಿತು. ಈಕೆ ಪ್ರಕರಣದ ಎರಡನೇ ಆರೋಪಿ ಎಂದು ಗುರುತಿಸಲಾಗಿದೆ .
ಕೊಲೆ ಆರೋಪಿ ಕಾರ್ಯಾಂಗೊ೦ಡಿನ ಸಿ.ಮನೋಜ್ ( 37) ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಹಿಂದಿನ ದಿನವೇ ರಂಜೂಷಾ ಮತ್ತು ಮನೋಜ್ ಕೊಲೆಗೆ ಯೋಜನೆ ರೂಪಿಸಿದ್ದರು. ಕೃತ್ಯ ಬೆಳಕಿಗೆ ಬಂದ ದಿನವೇ ಪತ್ನಿಯ ಕೈವಾಡ ಇರಬಹುದು ಎಂಬ ಶಂಕೆ ಮೂಡಿತ್ತು. ಈ ಹಿನ್ನಲೆಯಲ್ಲಿ ಸೈಬರ್ ಸೆಲ್ ನೆರವಿನಿಂದ ಇಬ್ಬರ ಮೊಬೈಲ್ ನ ಕರೆಗಳನ್ನು ಪರಿಶೀಲಿಸಲಾಗಿತ್ತು. ಕೊಲೆಗೆ ಮೊದಲು ಹಾಗೂ ಆ ಬಳಿಕವೂ ರಂಜೂಷಾಳು ಮನೋಜ್ ನ ಮೊಬೈಲ್ ಗೂ ಕರೆ ಮಾಡಿರುವುದು ಕಂಡು ಬಂದಿದೆ.
ಡಿಸೆಂಬರ್ ಏಳರಂದು ಸಂತೋಷ್ ಮೃತಪಟ್ಟ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದನು. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಸಂಶಯಿಸಲಾಗಿತ್ತು. ಕುತ್ತಿಗೆಯಲ್ಲಿ ಸಣ್ಣ ಗಾಯ ಕಂಡು ಬಂದುದರಿಂದ ಕೆಲ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷೆಯಿಂದ ಉಸಿರು ಗಟ್ಟಿಸಿ ಕೊಲೆ ನಡೆಸಿರುವುದು ಕಂಡು ಬಂದಿತ್ತು. ಇದರಂತೆ ಮರಣೋತ್ತರ ಪರೀಕ್ಷೆಯ ವರದಿಯಂತೆ ಪೊಲೀಸರು ತನಿಖೆ ನಡೆಸಿದ್ದರು.
ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಕೊನೆಗೆ ಆಗಾಗ ಮನೆಗೆ ಬರುತ್ತಿದ್ದ ಸಂತೋಷ್ ನ ಚಿಕ್ಕಮ್ಮನ ಪುತ್ರ ಮನೋಜ್ ನನ್ನು ಕರೆಸಿ ವಿಚಾರಣೆ ನಡೆಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಮಲಗಿದ್ದ ಸಂತೋಷ್ ನನ್ನು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು . ಮನೋಜ್ ಮತ್ತು ರಂಜೂಷಾ ನಡುವಿನ ಅನೈತಿಕ ಸಬಂಧ ಕೃತ್ಯಕ್ಕೆ ಕಾರಣ ಎನ್ನಲಾಗಿದೆ