ಉಳ್ಳಾಲ: ದೇರಳಕಟ್ಟೆಯಿಂದ ಅಡ್ಕರೆಪಡ್ಪು ಮೂಲಕ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ತಲುಪುವ ರಸ್ತೆಯ ಡಾಮರೀಕರಣಕ್ಕೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ಹಾಗೂ ಅಡ್ಕರೆಪಡ್ಪು, ಮಾರಿಯಮ್ಮಗೋಳಿ, ಬೆಲ್ಮ ಬರಿಕೆ(ಪೆಲತ್ತಡಿ), ಬದ್ಯಾರ್, ಕೊಣಾಜೆ ಸೈಟ್ನ ನಾಗರಿಕರು, ರಿಕ್ಷಾ ಚಾಲಕರು ಹಾಗೂ ಮಾಲಕರು ಜಂಟಿಯಾಗಿ ದೇರಳಕಟ್ಟೆಯಲ್ಲಿ ನಡೆಸಿದ ಪ್ರತಿಭಟನೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಿಸಿತು.
ಕೊಣಾಜೆ ಬೆಳ್ಮದಿಂದ ದೇರಳಕಟ್ಟೆವರೆಗೆ ಅಡ್ಕರೆಪಡ್ಪುವಿನ ರಸ್ತೆಯಲ್ಲಿ ಬೈಕ್ ರ್ಯಾಲಿ ಮತ್ತು ವಾಹನ ಜಾಥಾ ನಡೆದು, ದೇರಳಕಟ್ಟೆ ಜಂಕ್ಷನ್ನಿನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಬೆಳ್ಮ ಪಂಚಾಯಿತಿ ಉಪಾಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಸೇರಿ ಕೊಣಾಜೆ ಭಾಗದ ಸಮಸ್ಯೆಗೆ ಬೆಳ್ಮ ಪಂಚಾಯಿತಿ ಭಾಗದಲ್ಲಿ ಪ್ರತಿಭಟನೆ ನಡೆಸುವುದು ಖಂಡನೀಯ. ಬೆಳ್ಮ ಪಂ.ಗೆ ಸೇರಿದ ರಸ್ತೆಯ ದುರಸ್ತಿಯನ್ನು ನಡೆಸಲಾಗಿದೆ. ಸಚಿವರು ಹೆಚ್ಚಿನ ಒಲವು ತೋರಿಸುವ ಮೂಲಕ ಬೆಳ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ, ಏಳಿಗೆಯನ್ನು ಸಹಿಸಲಾಗದವರು ರಾಜಕೀಯ ದುರುದ್ದೇಶ ಇಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬೆಳ್ಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಹೇಳಿದ್ದಾರೆ.
ಬೆಳ್ಮ ಗ್ರಾಮಸ್ಥರು ಗ್ರಾಮದಲ್ಲಿ ಅಭಿವೃದ್ಧಿ ನಡೆಯುತ್ತಲೇ ಇದೆ. ಕೊಣಾಜೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬೆಳ್ಮ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಬಾರದು ಎಂದು ತಡೆಯೊಡ್ಡಲು ಯತ್ನಿಸಿದರು. ಅಲ್ಲದೆ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆಗೆ ತಡೆಯೊಡ್ಡಲು ಮುಂದಾದಾಗ ಕೊಣಾಜೆ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದರು. ಆದರೂ ಪ್ರತಿಭಟನೆಯನ್ನು ನಿಲ್ಲಿಸಿಯೇ ಸಿದ್ಧ ಎಂದು ತಂಡವೊಂದು ಮುನ್ನುಗ್ಗುತ್ತಿದ್ದಂತೆ ಕೊಣಾಜೆ ಎಸ್.ಐ ಸುಧಾಕರ್ ಅವರು ಸಮಾಧಾನಿಸಿ ಸ್ಥಳದಿಂದ ಎಲ್ಲರನ್ನು ತೆರಳುವಂತೆ ಮಾಡಿದರು.
ಈ ಸಂದರ್ಭ ತು.ರ.ವೇ ಮಹಿಳಾ ಘಟಕದ ಜ್ಯೋತಿಕಾ ಜೈನ್, ಯುವಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಡ್ಕರೆ, , ಕೊಣಾಜೆ ಘಟಕದ ಅಧ್ಯಕ್ಷ ಮಹಮ್ಮದ್ ನಿಯಾಝ್, ರಹೀಂ, ದೇವದಾಸ್, ರಾಘವ್ ಮಾಸ್ತರ್, ಗುರುಪ್ರಸಾದ್, ಇಸ್ಮಾಯಿಲ್, ಉಸ್ಮಾನ್, ಶರೀಫ್, ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.