ಕಾರ್ಕಳ: ಕೇಂದ್ರ ಸರ್ಕಾರ ನೀಡಿದ ಅನುದಾನದ ಹಣವನ್ನು ಖರ್ಚು ಮಾಡದೇ ಇಟ್ಟುಕೊಂಡು ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿದೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರೇ ಸರ್ಕಾರ ಅವ್ಯವಹಾರ ನಡೆಸುತ್ತಿರುವುದನ್ನು ಬಹಿರಂಗಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಅನುದಾನವನ್ನು ಯಾವ ಇಲಾಖೆಯೂ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಹಣ ಬಳಸುವಲ್ಲಿ ವಿಫಲರಾದ ಯಾವ ಅಧಿಕಾರಿಗಳನ್ನೂ ಈತನಕ ಸರ್ಕಾರ ಅಮಾನತು ಗೊಳಿಸಿಲ್ಲ. ಅಮಾನತುಗೊಳಿಸಲಾದ ಅಧಿಕಾರಿಯೊಬ್ಬರನ್ನು ತಕ್ಷಣ ಹಿಂಪಡೆಯಲಾಗಿದೆ.
ರಾಜ್ಯ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ರಾಜ್ಯದ ಜನತೆ ಸಿದ್ಧರಾಮಯ್ಯನವರ ಸರ್ಕಾರದಿಂದ ಬೇಸತ್ತಿದ್ದಾರೆ. ಮುಂದಿನ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಚೆನ್ನಾದ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಬೇಸತ್ತಿರುವುದಕ್ಕೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಯ ಅಭ್ಯರ್ಥಿಗಳಾಗಿ ಕೆಲವರು ಸ್ಪರ್ಧೆಗಿಳಿದಿರುವುದು ಸಾಕ್ಷಿ. ಬಿಜೆಪಿಯ ಅಭ್ಯರ್ಥಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತಾರೆ. ಮತದಾರರು ಕೇವಲ ಮೊದಲ ಪ್ರಾಶಸ್ತ್ಯದ ಮತವನ್ನು ಮಾತ್ರ ಚಲಾಯಿಸಬೇಕು. ಎರಡನೇ ಅಭ್ಯರ್ಥಿಯತ್ತ ಪ್ರಾಶಸ್ತ್ಯವೇ ಇರುವುದಿಲ್ಲ. ಬಿಜೆಪಿಗೆ ಕನಿಷ್ಠ 12 ಸ್ಥಾನಗಳು ದೊರೆಯಲಿವೆ ಎಂದರು.
ಶಾಸಕ ವಿ.ಸುನಿಲ್ ಕುಮಾರ್, ಶ್ಯಾಮಲಾ ಕುಂದರ್, ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಎಂ.ಕೆ.ವಿಜಯ ಕುಮಾರ್, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಮುಖಂಡ ಬೋಳ ಸದಾಶಿವ ಶೆಟ್ಟಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಕ್ರೆ ಅಂತೋನಿ ಡಿಸೋಜಾ, ನಗರಾಧ್ಯಕ್ಷ ಟಿ.ಗಿರಿಧರ ನಾಯಕ್, ಯುವ ಮೋರ್ಚಾ ಮುಖಂಡ ಮಹಾವೀರ್ ಹೆಗ್ಡೆ, ಕೌನ್ಸಿಲರ್ ಪಾಶ್ರ್ವನಾಥ ವರ್ಮ ಮೊದಲಾದವರು ಉಪಸ್ಥಿತರಿದ್ದರು.