ಕಾರ್ಕಳ: ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆರ್ ಎಂಸಿ ರೆಡಿಮಿಕ್ಸ್ ಇಂಡಿಯಾ ಸಂಸ್ಥೆ ಇಲ್ಲಿಂದ ಕಾನೂನು ಬಾಹಿರವಾಗಿ ಅಧಿಕ ಭಾರವಾಗಿ ಸಾಗಿಸುತ್ತಿರುವ ಜಲ್ಲಿಕಲ್ಲಿನ ಟಿಪ್ಪರ್ ಗಳಿಂದಾಗಿ ಇರ್ವತ್ತೂರು-ಸಾಣೂರು ಸಂಪರ್ಕ ಕೊಂಡಿಯಾಗಿರುವ ಕೋಳಿದಿಂಡಿ ಸೇತುವೆ ಬಿರುಕು ಬಿಟ್ಟಿದ್ದು ರಸ್ತೆ ಸಂಪೂರ್ಣ ಹದಗೆಡುತ್ತಿದ್ದು ಇದರಿಂದ ಆಕ್ರೋಶಗೊಂಡ ಇರ್ವತ್ತೂರು-ಕೆಲ್ಲಪುತ್ತಿಗೆಯ ಗ್ರಾಮಸ್ಥರು ಬಗಲ್ದಕಟ್ಟೆಯ ಕೆಂಪುಗುಡ್ಡೆ ಎಂಬಲ್ಲಿ ಬುಧವಾರ ನಸುಕಿನ ಜಾವದಲ್ಲಿಯೇ ರಸ್ತೆ ತಡೆ ನಡೆಸಿ ಟಿಪ್ಪರ್ ಸಂಚಾರಕ್ಕೆ ಅಡ್ಡಿ ಪಡಿಸಿದರು.
ರೆಂಜಾಳದಲ್ಲಿರುವ ಆರ್ ಎಂಸಿ ರೆಡಿಮಿಕ್ಸ್ ಇಂಡಿಯ ಸಂಸ್ಥೆಯು ಕಳೆದ ಕೆಲ ವರ್ಷಗಳಿಂದ ಕಪ್ಪುಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದು ಅವ್ಯಾಹಕವಾಗಿ ಟಿಪ್ಪರ್ಗಳ ಮೂಲಕ ಜಲ್ಲಿಕಲ್ಲುಗಳನ್ನು ಮಿಯ್ಯಾರು ಮೂಲಕ ಸಾಗಿಸಲಾಗುತ್ತಿತ್ತು. ಪರಿಣಾಮವಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಟಿಪ್ಪರ್ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ಕಳೆದ ಒಂದು ತಿಂಗಳಿನಿಂದ ಬಗಲ್ದಕಟ್ಟೆ ಕೆಂಪುಗುಡ್ಡೆಯ ಸಾಣೂರು ಬದಲಿ ರಸ್ತೆ ಮೂಲಕ ಜಲ್ಲಿಕಲ್ಲು ಸಾಗಿಸಲಾಗುತ್ತಿತ್ತು.
ರೆಂಜಾಳ ಗ್ರಾಮ ಪಂಚಾಯತ್ ನಲ್ಲಿ ಸಂಸ್ಥೆ ಇರುವುದರಿಂದ ಅದಾಯ ಅದೇ ಗ್ರಾಮ ಪಂಚಾಯತ್ ಗೆ ಸೇರುತ್ತಿದೆ. ಬಗಲ್ದಕಟ್ಟೆ ಕೆಂಪುಗುಡ್ಡೆಯ ಮೂಲಕವಾಗಿ ಟಿಪ್ಪರ್ ಗಳು ಬೇಕಾಬಿಟ್ಟಿಯಾಗಿ ಓಡಾಟ ನಡೆಸುತ್ತಿರುವುದರಿಂದ ರಸ್ತೆ,ಸೇತುವೆ ಹದಗೆಡುತ್ತಿದ್ದು ಅದರ ನಷ್ಟವು ಇರ್ವತ್ತೂರು ಗ್ರಾಮ ಪಂಚಾಯತ್ ಸೇರುತ್ತಿದೆ ಎಂಬ ವಾದವು ಇರ್ವತ್ತೂರು ಗ್ರಾಮಸ್ಥರದಾಗಿದೆ.
ಈ ಬಗ್ಗೆ ಕಳೆದ ಒಂದು ವಾರದ ಹಿಂದೆ ಉಡುಪಿ ಜಿಲ್ಲಾಧಿಕಾರಿ, ಕಾರ್ಕಳ ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ,ಗ್ರಾಮ ಪಂಚಾಯತ್ ಸೇರಿದಂತೆ ಜನಪತ್ರಿನಿಧಿಗಳಿಗೆ ಇರ್ವತ್ತೂರಿನ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಇಲಾಖಾಧಿಕಾರಿಗಳು ವಿಫಲರಾದ ಹಿನ್ನಲೆಯಲ್ಲಿ ಗ್ರಾಮಸ್ಥರು ನಸುಕಿನ ಜಾವದಲ್ಲಿ ಬೀದಿಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ದೇವಾಡಿಗ, ಉಪಾಧ್ಯಕ್ಷೆ ವಿಮಲಾ, ಸದಸ್ಯರಾದ ಚಂದ್ರರಾಜ್ ಅಧಿಕಾರಿ, ಉದಯ ಆಚಾರ್ಯ, ರೇವತಿ, ಕಿಸಾನ್ ಸಭಾದ ಕಾರ್ಯದರ್ಶಿ ಶ್ರೀನಿವಾಸ ಭಟ್, ಕುಲಾಲ್ ಸಂಘದ ಅಧ್ಯಕ್ಷ ಜಯಕುಲಾಲ್, ಗ್ರಾಮಸ್ಥರಾದ ವಸಂತ ಪೈ, ವಿಜಯಕುಮಾರ್, ವಿಜಯಕುಮಾರ್ ಜೈನ್, ಉದಯ.ಎಂ ವಿಜಯಕುಮಾರ್, ಸತೀಶ್ ಮಡಿವಾಳ, ಅನಂತಭಟ್, ನಾರಾಯಣ ಭಟ್, ರಮಾನಾಥ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
50 ವರ್ಷಗಳ ಹಿಂದಿನ ಸೇತುವೆ
ಗೋಳಿದಿಂಡಿಯ ಸೇತುವೆಯು ಸುಮಾರು 50 ವರ್ಷಗಳ ಹಿಂದಿನದು ಎಂದು ತಿಳಿದುಬಂದಿದೆ. ತಾಲೂಕು ಪಂಚಾಯತ್ ಅಧೀನದಲ್ಲಿ ಇದ್ದಂತಹ ಈ ಸೇತುವೆ ಹಾಗೂ ಇಲ್ಲಿ ಹಾದು ಹೋಗು ರಸ್ತೆಯು ಜಿಲ್ಲಾ ಪಂಚಾಯತ್ ಅಧೀನಕ್ಕೊಳಪಟ್ಟಿತ್ತು. ಪ್ರಸ್ತುತ ಲೋಕೋಪಯೋಗಿ ಇಲಾಖೆಗೆ ಅಧೀನದಲ್ಲಿದೆ. 10 ಟನ್ ಸಾಮಾರ್ಥ್ಯ ಹೊತ್ತು ಸಾಗಾಟಕ್ಕೆ ಅನುಕೂಲವಾಗುವಂತೆ ಅಂದು ನಿರ್ಮಾಣಗೊಂಡ ಈ ಸೇತುವೆ ಹಾಗೂ ರಸ್ತೆಯಲ್ಲಿ ಪ್ರಸ್ತುತ ದಿನಗಳಲ್ಲಿ 18 ಟನ್ ಭಾರ ಹೊತ್ತು ಟಿಪ್ಪರ್ ಸಂಚಾರ ನಡೆಸುತ್ತಿರುವುದು ದುರಂತಕ್ಕೆ ಪೀಠೀಕೆಯಾದರೂ ಅಚ್ಚರಿ ಇಲ್ಲ.
ಸಂಸ್ಥೆ ಪರ ನಿಲುವು: ವಿವಾದ ತಾರಕ್ಕೇರಲು ಪ್ರೇರಣೆ
ಗ್ರಾಮಸ್ಥರು ಸಾಂಕೇತಿಕವಾಗಿ ನಸುಕಿನ ಜಾವದಲ್ಲಿ ರಸ್ತೆ ತಡೆ ನಡೆಸುತ್ತಿದ್ದು ಅದೇ ವೇಳೆಗೆ ಕೆಲವರು ಸಂಸ್ಥೆಯ ಪರವಾಗಿ ವಕಾಲತ್ತು ವಹಿಸಿ ಮಾತನಾಡಲು ಮುಂದಾಗಿದ್ದರಲ್ಲದೇ ಸಂಸ್ಥೆಗೆ ಕರೆ ಮಾಡಿ ಎಲ್ಲಾ ಟಿಪ್ಪರ್ ಗಳು ಬರಲಿ. ಧೈರ್ಯವಿದ್ದರೆ ರಸ್ತೆ ಮಾಡಿ ನೋಡಲಿ, ಹಾಯಿಸಿ ಹೋದರೆ ಆಯಿತು ಎಂಬ ದರ್ಪ ಮಾತುಗಳು ಆಡಿರುವುದು ಸ್ಥಳದಲ್ಲಿ ಬಿಗು ವಾತಾವರಣಕ್ಕೆ ಕಾರಣವಾಯಿತು. ಈ ಮಾಹಿತಿ ತಿಳಿದ ಇನ್ನಷ್ಟು ಗ್ರಾಮಸ್ಥರು ಸ್ಥಳದಲ್ಲಿ ನೆರೆದರು. ಮಾಹಿತಿ ತಿಳಿದ ಗ್ರಾಮಕರಣಿಕರು, ಲೋಕೋಪಯೋಗಿ ಇಲಾಖೆಯ ಉಪ ಅಭಿಯಂತ, ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಅಗಮಿಸಿ ಕ್ರಮ ಕೈಗೊಂಡಿದ್ದಾರೆ.