ಮೂಡುಬಿದಿರೆ: ಆಳ್ವಾಸ್ ವಿರಾಸತ್ ನ ಕೊನೆಯ ದಿನ ದೇಶದ ಹೆಸರಾಂತ ಗಾಯಕರಿಂದ ನಡೆದ ಸಂಗೀತ ವೈಭವ ವಿಶೇಷ ಮೆರುಗು ನೀಡಿತು.
ಸಂಗೀತ ವೈಭವದಲ್ಲಿ ಮೊದಲಿಗೆ ಹಿನ್ನಲೆ ಗಾಯಕ ಕಾರ್ತಿಕ್ ಚೆನ್ನೈ ಗಣಪತಿ ಸ್ತುತಿ, ಪ್ರಾರಂಭಿಸಿದರು. ನಂತರ ತಮಿಳು, ಹಿಂದಿ ಪ್ರಸಿದ್ಧ ಚಲನಚಿತ್ರಗಳ ಹಾಡುಗಳನ್ನು ಹಾಡಿದರು. ಬಳಿಕ ಗಾಯಕ ವಿಜಯ ಪ್ರಕಾಶ್ ಅವರು ಉಳಿದವರು ಕಂಡಂತೆ ಚಲನ ಚಿತ್ರದ ಘಟ್ಟದ ಅಂಚಿದಾಯೆ..ತೆಂಕಾಯಿ ಬತ್ತ್ ತೂಯೆ ಎಂಬ ತುಳು ಹಾಡಿನ ಸಾಲುಗಳಿರುವ ಹಾಡು ಮತ್ತು ಅಧ್ಯಕ್ಷ ಚಲನಚಿತ್ರದ ಓಪನ್ ಹೇರ್ ಬಿಟ್ಕೊಂಡು.., ತರವಲ್ಲ ತಂಗೀ ನಿನ್ನಾ ತಂಬೂರಿ ಸ್ವರ ಎಂಬ ಜಾನಪದ ಹಾಡು ಯಾರೇ ನೀನು ರೋಜಾ ಹೂವೇ ಸಹಿತ ಹಲವು ಪ್ರಸಿದ್ಧ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು.
ರಮ್ಸ್ ನಲ್ಲಿ ಅರುಣ್ ಕುಮಾರ್, ಗಿರಿಧರ್ ಉಡುಪ-ಘಟಂನಲ್ಲಿ, ಬೇಸ್ ಗಿಟಾರ್ ನಲ್ಲಿ ಕೇತ್ ಫೀಟರ್, ಲೀಡ್ ಗಿಟಾರ್ ನಲ್ಲಿ ವಿಜಯ ಜೋಸೆಫ್, ತಬಲಾದಲ್ಲಿ ಪ್ರದ್ಯುಮ್ನ ಹಾಗೂ ನವನೀತ್ ಸುಂದರ್ ಮತ್ತು ಹರ್ಷಾ ಕೀಬೋರ್ಡ್ ನಲ್ಲಿ ಸಾಥ್ ನೀಡಿದರು.
ಡಾ. ಮನುಪರೇಖಾಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರದಾನ
ಹಿರಿಯ ಕಲಾವಿದ ದೆಹಲಿಯ ಪದ್ಮಶ್ರೀ ಡಾ. ಮನು ಪರೇಖ್ ಅವರಿಗೆ ವರ್ಣ ವಿರಾಸತ್ ಪ್ರಶಸ್ತಿಯನ್ನು ವಿರಾಸತ್ ಕೊನೆಯ ದಿನವಾದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು.
ಪದ್ಮಶ್ರೀ ಪುರಸ್ಕೃತರಾದ ಹಿರಿಯ ಕಲಾವಿದ ಡಾ. ಮನು ಪರೇಖ್ ಅವರಿಗೆ ಶಾಲು ಹೊದೆಸಿ, ಆಳ್ವಾಸ್ ಸ್ಮರಣಿಕ ನೀಡಿ 25 ಸಾವಿರ ನಗದು ನೀಡಿ ಗೌರವಿಸಲಾಯಿತು. ಮನುಪರೇಖ್ ಅವರ ಪತ್ನಿ ಮಾಧವಿ ಪರೇಖ್, ಆಳ್ವಾಸ್ ವಿರಾಸತ್ ರೂವಾರಿ ಡಾ.ಎಂ ಮೋಹನ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ, ನಿಟ್ಟೆ ವಿವಿಯ ಉಪ ಕುಲಪತಿ ಡಾ. ಎಸ್. ರಮಾನಂದ ಶೆಟ್ಟಿ, ಮುಡಿಪು ಸೂರಜ್ ಎಜುಕೇಶನ್ ,ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ,ಮುನಿಯಾಲು ಆಯುರ್ವೇದ ಕಾಲೇಜಿನ ಆಡಳಿತ ನಿರ್ದೇಶಕ ವಿಜಯ ಭಾನು ಶೆಟ್ಟಿ ಮತ್ತು ಸಲಹಾ ಸಮಿತಿಯ ಸದಸ್ಯರಾದ ಗಣೇಶ್ ಸೋಮಯಾಜಿ ಮತ್ತು ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ಬಂಟ್ಸ್ ಎಸೋಸಿಯೇಶನ್ ಮುಂಬೈ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನಿರೆ, ಮೂಡುಬಿದಿರೆಯ ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಗಣ್ಯರೊಂದಿಗೆ ರಾಜಸ್ತಾನಿ ಕಲಾಮೇಳದಲ್ಲಿ ಸ್ವಾಗತಿಸಲಾಯಿತು.