ಮಂಗಳೂರು: ಹದಿನಾರು ವರುಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಂಗಳೂರಿನ ಕಾವೂರು ಎಂಬಲ್ಲಿ ನಡೆದಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಂಜತ್ತ ಬೈಲಿನ ಪ್ರಶಾಂತ ಶೆಟ್ಟಿ ಮತ್ತು ಆತನ ಗೆಳೆಯರಾದ ಸಲ್ಮಾನ್, ಆದಿಲ್, ನೌಫಾಲ್ ಮತ್ತು ಇನ್ನೂ ಗುರುತು ಸಿಗದ ಯುವಕನೋರ್ವ ಬಂಧಿತ ಆರೋಪಿಗಳು. ಪ್ರಶಾಂತ್ ಶೆಟ್ಟಿ ಯುವತಿಯ ನೆರಮನೆಯವನಾಗಿದ್ದು ಈತ ಘಟನೆಯ ಪ್ರಮುಖ ಆರೋಪಿಯಾಗಿದ್ದು, ಈತ ಯುವತಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇತ್ತೀಚೆಗೆ ಮತ್ತೆ ಯುವತಿಯನ್ನು ಬಲವಂತಪಡಿಸುತ್ತಿದ್ದ ಪ್ರಶಾಂತ ಶೆಟ್ಟಿ ತನ್ನ ಗೆಳೆಯರೊಂದಿಗೂ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಗೆಳೆಯರ ಜೊತೆ ಲೈಂಗಿಕ ಸಂಬಂಧ ಬೆಳೆಸದಿದ್ದರೆ ಮುಂದಿನ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಬೆದರಿಕೆ ಒಡ್ಡಿದ್ದ. ಆದರೂ ಯುವತಿ ಇದಕ್ಕೆ ಸಮ್ಮತಿಸಿರಲಿಲ್ಲ ಎನ್ನಲಾಗಿದೆ.
ಯುವತಿ ನೀಡಿದ ದೂರಿನ ಪ್ರಕಾರ ಡಿಸೆಂಬರ್ 27ರಂದು ಪ್ರಶಾಂತನ ಮೊಬೈಲ್ನಿಂದ ಸಲ್ಮಾನ್ ಯುವತಿಗೆ ಕರೆ ಮಾಡಿದ್ದ. ಕರೆ ಮಾಡಿದ ಸಲ್ಮಾನ್ ಪಂಜಿನಮೊಗರು ಬಸ್ ನಿಲ್ದಾಣದ ಬಳಿ ಬರಬೇಕೆಂದೂ, ತುಂಬಾ ಮುಖ್ಯ ವಿಷಯ ಮಾತಾಡುವುದಿದೆ ಎಂದು ಫೋನ್ನಲ್ಲಿ ಹೇಳಿದ್ದ. ಯುವತಿ ಪಂಜಿನಮೊಗರು ಬಸ್ ಸ್ಟಾಪ್ ತಲುಪಿದಾಗ ಆದಿಲ್ ಎಂಬಾತ ಯುವತಿಯನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಪಂಜಿನಮೊಗರಿನ ಮನೆಯೊಂದಕ್ಕೆ ಕರೆದುಕೊಂಡು ಹೋದ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಪ್ರಶಾಂತ್ ಶೆಟ್ಟಿ, ಸಲ್ಮಾನ್, ನೌಫಾಲ್ ಮತ್ತು ಅಪರಿಚಿತ ಯುವಕನೋರ್ವ ಇದ್ದುದು ಯುವತಿಯ ಗಮನಕ್ಕೆ ಬಂದಿದೆ. ಅದು ಸಲ್ಮಾನ್ ಮನೆ ಎಂದು ಆಕೆಗೆ ಮನವರಿಕೆ ಮಾಡಲಾಗಿದೆ. ಬಳಿಕ ಜ್ಯೂಸ್ ಒಂದನ್ನು ಆಕೆಗೆ ನೀಡಲಾಗಿದೆ. ಅದಾದ ಕೆಲವೇ ನಿಮಿಷಗಳಲ್ಲಿ ಐವರೂ ಸಹ ಆಕೆಯ ಮೇಲೆ ಒಬ್ಬೊಬ್ಬರಾಗಿ ಮೃಗಗಳಂತೆ ಮುಗಿಬಿದ್ದು ಅತ್ಯಾಚಾರ ನಡೆಸಿದ್ದಾರೆ. ಯುವತಿ ಪ್ರತಿರೋಧ ಒಡ್ಡಿದಾಗ ಆಕೆಗೆ ಹಿಂಸೆಯನ್ನೂ ನೀಡಲಾಗಿದೆ. ಕೃತ್ಯವೆಸಿದ ಬಳಿಕ ಆಕೆಯನ್ನು ಬಸ್ ನಿಲ್ದಾಣದ ಬಳಿ ಬಿಟ್ಟು ತೆರಳಿದರು. ತೀರಾ ಬಳಲಿಸದ ಆಕೆಯನ್ನು ನೋಡಿದ ಅಲ್ಲಿನ ಸ್ಥಳೀಯರು ಮನೆಗೆ ಕರೆಗೊಯ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಕಾವುರು ಪೊಲೀಸರು ತನಿಖೆ ನಡೆಸುತ್ತಿಸದ್ದಾರೆ.