ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕದಂಗವಾಗಿ ರಾಜ್ಯ ಸರ್ಕಾರವು ಕಾರ್ಕಳದ ರಸ್ತೆ ಅಭಿವೃದ್ಧಿಗೆ 13 ಕೋಟಿ ಬಿಡುಗಡೆಗೊಳಿಸಿದೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಸಂದರ್ಭ ಮೂಡುಬಿದರೆಯ ರಸ್ತೆಗಳನ್ನು ದ್ವಿಪಥಗೊಳಿಸಲು ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಮೂಡುಬಿದರೆ ಅಭಿವೃದ್ಧಿ ಕುರಿತು ಪುರಸಭೆಯಲ್ಲಿ ಪುರಸಭಾ ಸದಸ್ಯರು ಮತ್ತು ಪತ್ರಕರ್ತರ ನಡೆದ ಸಂವಾದದಲ್ಲಿ ಹೇಳಿಕೆ ನೀಡಿದರು.
ಹಳೆ ಪೋಲೀಸ್ ಠಾಣೆ ಬಳಿ ವೃತ್ತ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿ ಮತ್ತು ಪೋಲೀಸ್ ಕಮೀಷನರ್ ಜೊತೆ ಚರ್ಚಿಸುವುದಾಗಿ ಹೇಳಿದರು. ಪುರಸಭೆಯಿಂದ ನಗರಕ್ಕೆ ನೀರು ಸರಬರಾಜಾಗುತ್ತಿರುವ ಪುಚ್ಚಮೊಗರು ವೆಂಟೆಡ್ ಡ್ಯಾಮ್ ನಿಂದ ಅಳವಡಿಸಿದ ಪೈಪುಗಳು ಒಡೆಯುತ್ತಿದ್ದು ಅದಕ್ಕೆ ಹೊಸ ಪೈಪ್ಗಳನ್ನು ಅಳವಡಿಸಬೇಕು ಹಾಗೂ ಆನೆ ಗುಂಡಿಯಿಂದ ಜಾಕ್ವೆಲ್ ಮೂಲಕ ಬೇಸಿಗೆಯಲ್ಲಿ ವೆಂಟೆಡ್ ಡ್ಯಾಮ್ ಗೆ ನೀರು ಒದಗಿಸಬೇಕು ಎಂದು ಪುರಸಭಾ ಸದಸ್ಯ ಪಿ. ಕೆ. ಥೋಮಸ್ ಸಲಹೆ ನೀಡಿದರು.
ಈ ಕುರಿತು ವಿವರಣೆ ನೀಡಿದ ಇಂಜಿನಿಯರ್ ದಿನೇಶ್ ಹೊಸ ಪೈಪ್ ಲೈನ್ ಅಳವಡಿದಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 3.10 ಕೋಟಿ ರುಪಾಯಿಯ ಯೋಜನೆ ರೂಪಿಸಿರುವುಗಿ ವಿವರಣೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಭಯಚಂದ್ರ ಜೈನ್ ಇದು ಸರ್ಕಾರದ ಹಣವನ್ನು ಪೋಲುಮಾಡುವ ಯೋಜನೆಯಾಗಿದ್ದು ಪುರಸಭೆಯಿಂದಲೇ ಈ ಕುರಿತು ಯೋಜನಾ ವರದಿ ತಯಾರಿಸುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದರು ಹಾಗೂ ಪುರಸಭೆಯಿಂದಲೇ ಕಾಮಗಾರಿಯನ್ನು ನಡೆಸಲು 2ಕೋಟಿ ರೂಪಾಯಿ ಅನುದಾನ ಒದಗಿಸುವುದಾಗಿ ಹೇಳಿದರು.
ಒಳಚರಂಡಿ ಕಾಮಗಾರಿಯ ಬಗ್ಗೆ ವಿವರಣೆ ನೀಡಿದ ಕಂದಾಯ ಅಧಿಕಾರಿ ಧನಂಜಯ ಈಗಾಗಲೇ 11 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಪರಿಹಾರ ಧನ ವಿತರಿಸಲಾಗುತ್ತಿದೆ ಉಳಿದ 14 ಎಕರೆ ಜಾಗ ಭೂಸ್ವಾಧೀನಕ್ಕೆ ಬಾಕಿ ಉಳಿದಿದೆ ಎಂದರು. ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಹಾಗೂ ರಾಜೀವಗಾಂಧಿ ವಾಣಿಜ್ಯ ಸಂಕೀರ್ಣಕ್ಕೆ ಮತ್ತೊಂದು ಮಹಡಿ ನಿರ್ಮಿಸುವುದಕ್ಕೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು ಸರ್ಕಾರದ ಕೆಲಸವನ್ನು ವಿಳಂಭಗೊಳಿಸಿದಂತೆ ಎಚ್ಚರಿಸಿದರು. ಮೆಸ್ಕಾಂ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆಯ ಕುರಿತು ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲಾಯಿತು. ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.