ಮೂಡುಬಿದಿರೆ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಗಿರೀಶ್ ಈಶ್ವರ ಪೂಜಾರಿ (35) ಅವರು ಶನಿವಾರದಂದು ರಾಜಸ್ಥಾನದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗಿರೀಶ್ ಅವರು ಮೂಡುಬಿದಿರೆ ಸಮೀಪದ ಬಡಗ ಮಿಜಾರು ಉರ್ಕೆ ನಂದಾಡಿಯ ದಿ.ಈಶ್ವರ ಪೂಜಾರಿಯ ಪುತ್ರ. ಕಳೆದ 17 ವರ್ಷಗಳಿಂದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು 20 ದಿನಗಳ ಹಿಂದೆ ಹುಟ್ಟೂರಿಗೆ ಆಗಮಿಸಿ ಪತ್ನಿ ರೂಪಾ ಮತ್ತು ನಾಲ್ಕು ವರ್ಷದ ಪುತ್ರ ಗಗನ್ ನನ್ನು ಕರೆದುಕೊಂಡು ರಾಜಸ್ಥಾನಕ್ಕೆ ತೆರಳಿದ್ದರು.
ತೋಡಾರಿನ ಮುಳಿಬೆಟ್ಟು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹೊಸಬೆಟ್ಟುವಿನ ಸರಕಾರಿ ಶಾಲೆ ಕೊನ್ನೆಪದವಿನಲ್ಲಿ ಪ್ರೌಢ ಶಿಕ್ಷಣ ಹಾಗೂ ಆಂಧ್ರಪ್ರದೇಶದ ಸಿಕಂದರಬಾದಿನಲ್ಲಿ ಪಿಯು ಶಿಕ್ಷಣವನ್ನು ಪಡೆದಿದ್ದರು. ಮೃತ ಶರೀರವನ್ನು ರಾಜಸ್ಥಾನದಿಂದ-ದೆಹಲಿ, ದೆಹಲಿ-ಬೆಂಗಳೂರು ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ವಿಮಾನದ ಮೂಲಕ ಸರಕಾರಿ ಗೌರವದೊಂದಿಗೆ ಹುಟ್ಟೂರಿಗೆ ಇಂದು (ಸೋಮವಾರ) ತರಲಾಗುವುದು.