ಮೂಡುಬಿದಿರೆ: ರಾಜಸ್ಥಾನದ ಗಂಗಾನಗರದ ಸೇನಾ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಡಗಎಡಪದವು ಗ್ರಾಮದ ಗಿರೀಶ್ ಈಶ್ವರ ಪೂಜಾರಿ (35), ಜ.2ರಂದು ಸೇನಾ ವಸತಿಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವು ಸೋಮವಾರ ರಾತ್ರಿ ಉರ್ಕಿ ಮನೆಯಲ್ಲಿ ನಡೆಯಿತು.
ರಾಜಸ್ಥಾನದ ಗಂಗಾನಗರದ 616 ಇಎಂಇ ಬೆಟಾಲಿನ್ ನ ತಾಂತ್ರಿಕ ವಿಭಾಗದಲ್ಲಿ ಕಾರ್ಯ ನಿರ್ವಸುತ್ತಿದ್ದ ಗಿರೀಶ್ ಅವರು ಶನಿವಾರ ಮಧ್ಯಾಹ್ನ ಮಿಲಿಟರಿ ವಸತಿಗೃಹಕ್ಕೆ ಊಟಕ್ಕೆ ಬಂಧಿದ್ದರು. ಬಚ್ಚಲುಮನೆಗೆ ಹೋದ ಸಂದರ್ಭ ಅವರು ಕುಸಿದು ಬಿದಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು.
ರಾಜಸ್ಥಾನದಿಂದ ದೆಹಲಿಗೆ ಸೋಮವಾರ ಬೆಳಿಗ್ಗೆ ಮೃತದೇಹವನ್ನು ಅಂಬ್ಯುಲೆನ್ಸ್ ಮುಖಾಂತರ ಕರೆ ತರಲಾಯಿತು. 10ಗಂಟೆಗೆ ದೆಹಲಿಯಿಂದ ಗಿರೀಶ್ ಮೃತದೇಹವನ್ನು ವಿಮಾನ ಬೆಂಗಳೂರಿಗೆ ಸಾಗಿಸಲಾಯಿತು. ಮಧ್ಯಾಹ್ನ 12.45 ವೇಳೆಗೆ ಬೆಂಗಳೂರಿಗೆ ಮೃತದೇಹವು ತಲುಪಿದ್ದು, 2 ಗಂಟೆಗೆ ಮೃತದೇಹವನ್ನು ಮತ್ತೆ ಮೂಡುಬಿದಿರೆ ಸಮೀಪದ ಬಡಗ ಎಡಪದವಿಗೆ ಅಂಬ್ಯುಲೆನ್ಸ್ ಮುಖಾಂತರ ತರಲಾಯಿತು. ಸುಮಾರು 10ಗಂಟೆ ವೇಳೆಗೆ ಗಿರೀಶ್ ಮೃತದೇಹವು ಉರ್ಕೆಯ ಮನೆಯನ್ನು ತಲುಪಿದ್ದು, ಸೇನಾ ಅಧಿಕಾರಿಗಳು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ಸುಬೇದರ್ ಜಿ.ಬಿ ಶರತ್ ಹಾಗೂ ಗಿರೀಶ್ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದ ನಾಯಕ್ ಪಳಣಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಕುಮಾರ್, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ,ಬಜ್ಪೆ ಪೊಲೀಸ್ ನಿರೀಕ್ಷಕ ಟಿ.ಡಿ ನಾಗರಾಜ್, ಮೂಡುಬಿದಿರೆ ಅರಣ್ಯಾಧಿಕಾರಿ ಜಿ.ಡಿ ದಿನೇಶ್, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡ ಉಮನಾಥ ಕೋಟ್ಯಾನ್, ಬಡಗ ಎಡಪದವು ಗ್ರಾಪಂ ಅಧ್ಯಕ್ಷೆ ಲಲಿತ, ಜಿಪಂ ಸದಸ್ಯ ಜನಾರ್ಧನ ಗೌಡ, ತಾಪಂ ಸದಸ್ಯ ಪ್ರಕಾಶ್ ಮತ್ತಿತರ ಜನಪ್ರತಿನಿಧಿಗಳು ಯೋಧನ ಅಂತಿಮ ದರ್ಶನ ಪಡೆದರು. ಸುಧಾಕರ ಪೂಂಜ ಮೃತರ ನಿವಾಸಕ್ಕೆ ತೆರಳಿ ಮನೆಯವರಿಗೆ ಸಾಂತ್ವನ ನೀಡಿದರು.