ಬಂಟ್ವಾಳ: ಶಾಲಾ ವಿದ್ಯಾರ್ಥಿಯೊರ್ವ ವಸತಿ ನಿಲಯದಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ವಗ್ಗದಲ್ಲಿ ನಡೆದಿದೆ.
ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು 10ನೇ ತರಗತಿ ವಿದ್ಯಾರ್ಥಿ ದೀಶಕ್(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ. ಬೆಳ್ಳಿಗ್ಗೆ 9 ಗಂಟೆಯ ಸುಮಾರಿಗೆ ಶಾಲಾ ಸಮವಸ್ತ್ರ ಧರಿಸಿ ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗಿನ ಉಪಾಹಾರ ಸೇವಿಸಲು ಅಣಿಯಾಗುತ್ತಿದ್ದಂತೆಯೇ ದೀಶಕ್ ಕೂಡ ಸಮವಸ್ತ್ರ ಧರಿಸಿ ಕೊಠಡಿಯಿಂದ ಹೊರಬಂದಿದ್ದು ನೀವೆಲ್ಲಾ ಹೋಗಿ ನಾನು ಮತ್ತೆ ಬರುತ್ತೇನೆ ಎಂದ ಹೇಳಿ ವಸತಿ ನಿಲಯದ ಕೊಠಡಿಗೆ ವಾಪಸ್ಸಾಗಿದ್ದಾನೆ. ಬಳಿಕ ಬಟ್ಟೆ ಒಣಗಿಸುವ ಹಗ್ಗವನ್ನು ಬಳಸಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ. ಘಟನೆಗೆ ಸ್ಪಷ್ಟ ಕಾರಣ ಏನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸೈ ರಕ್ಷಿತ್ ಎ.ಕೆ.ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ.
ಕೆಳಗಿನ ವಗ್ಗ ನಿವಾಸಿಯಾಗಿದ್ದ ದಿ. ದೇವಣ್ಣ ನಾಯಕ್ ಹಾಗೂ ಶ್ಯಾಮಲ ದಂಪತಿಗಳ ಎರಡನೇ ಪುತ್ರ ದೀಶಕ್. ಎರಡನೇ ತರಗತಿಯವರೆಗೆ ಕೆಳಗಿನ ವಗ್ಗದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಈತ ಬಳಿಕ ಮುಂಬಾಯಿಗೆ ತೆರಳಿ ತನ್ನ ಮಾವನ ಮನೆಯಲ್ಲಿದ್ದುಕೊಂಡು 5 ತರಗತಿಯವೆರಗೆ ಅಲ್ಲಿಯೇ ವಿದ್ಯಾಭ್ಯಾಸ ಮುಂದುವರೆಸಿದ್ದ. ಬಳಿಕ ಮತ್ತೆ ಊರಿಗೆ ಮರಳಿ 6ನೇ ತರಗತಿಯಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ. ಈತನ ಸಹೋದರ ದೀಪಕ್ ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ತಂದೆ ದೇವಣ್ಣ ಕಾಮತ್ ಎರಡು ವರ್ಷಗಳ ಹಿಂದೆ ಇದೇ ರೀತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಶ್ಯಾಮಲ ಅವರ ಎರಡು ಕಣ್ಣುಗಳು ದೃಷ್ಟಿಯನ್ನು ಕಳೆದುಕೊಂಡಿದೆ. ಅಜ್ಜ ವಗ್ಗ ಗೋಪಾಲಕೃಷ್ಣ ಪ್ರಭು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದು ಕೌಟುಂಬಿಕ ಸಮಸ್ಯೆಗಳು ಯಾವುದು ಇರಲಿಲ್ಲ. ಕಲಿಕೆಯಲ್ಲಿ ಮುಂದೆ ಇದ್ದ ಈತನಿಗೆ ಹಲವಾರು ಬಹುಮಾನಗಳು ಬಂದಿವೆ. ಆದರೆ ವಿದ್ಯಾರ್ಥಿಯ ನಿರ್ಧಾರದಿಂದ ಪೋಷಕರು, ಸಹಪಾಠಿಗಳು ಹಾಗೂ ಶಿಕ್ಷಕರನ್ನು ಬೆಚ್ಚಿಬೀಳಿಸಿದೆ.
ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ದೀಶಕ್ ನಾಲ್ಕನೆವರೆಗೆ ತನ್ನೂರಿನ ಸಮೀಪದ ಆಲಂಪುರಿ ಶಾಲೆಯಲ್ಲಿ ಕಲಿತರೆ, ನಂತರದ ಎರಡು ವರ್ಷ ಮುಂಬಯಿಯ ಮಾವನ ಆಶ್ರಯದಲ್ಲಿದ್ದುಕೊಂಡು ಕಲಿತ್ತಿದ್ದ. ಆರನೇ ತರಗತಿಯ ಬಳಿಕ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲೆಯಲ್ಲಿ ಪ್ರತಿಭಾನ್ವಿತನಾಗಿದ್ದ. ದೃಷ್ಟಿ ಇಲ್ಲದ ತಾಯಿ, ತಂದೆಯಿಲ್ಲದ ಅನಾಥತೆ ಈತನಲ್ಲಿ ಒಂಟಿತನ ಮೂಡಿಸಿ, ಈ ಕೃತ್ಯಕ್ಕೆ ಪ್ರೇರೇಪಣೆ ನೀಡಿತೇ ಎಂಬ ಸಂಶಯ ಮೂಡಿದೆ.