ಪಾಂಡವಪುರ: ಬಜೆಟ್ ನಲ್ಲಿ ಘೋಷಿಸಿರುವಂತೆ ಕಾಂಗ್ರೆಸ್ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ 70 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಹಾಗೂ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಚಿಕ್ಕದೇವರಾಯಸಾಗರ (ಸಿಡಿಎಸ್) ಅಣೆಕಟ್ಟು ನಾಲೆಯ ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಜ್ಯದ ಕೃಷ್ಣ, ಕಾವೇರಿ, ಗೋದಾವರಿ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1.20 ಲಕ್ಷ ಕೋಟಿ ರೂ. ಅಗತ್ಯವಿದ್ದು, ಈ ಅವಧಿಯಲ್ಲಿ ಎಲ್ಲವೂ ಆಗುವುದಿಲ್ಲ. ರಾಜ್ಯದ ಜನತೆ ಇನ್ನೊಂದು ಅವಧಿಗೆ ಅಧಿಕಾರ ಕಲ್ಪಿಸಿದರೆ ಗ್ಯಾರಂಟಿ ಪೂರ್ಣ ಮಾಡುತ್ತೇವೆ ಎಂದರು.
ಮೂರು ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ 33 ಸಾವಿರ ಕೋಟಿ ರೂ. ಒದಗಿಸಿದ್ದೇನೆ. ಬಜೆಟ್ ನಲ್ಲಿ 50 ಸಾವಿರ ಕೋಟಿ ರೂ. ಒದಗಿಸುವುದಾಗಿ ಹೇಳಿದ್ದೆ. ಅದರ ಬದಲಿಗೆ 70 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದರು.
ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕು ಎಂಬುದೇ ನಮ್ಮ ಸರ್ಕಾರದ ಘೋಷಣೆಯಾಗಿದೆ. ಕೆಆರ್ ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲ ನಾಲೆಗಳ ಆಧುನೀಕರಣ ಮಾಡುವ ಉದ್ದೇಶವಿದ್ದು, 2200 ಕಿ.ಮೀ.ವರೆಗೆ ನಾಲೆಗಳ ಉದ್ದವಿದ್ದು, ಅದರಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 375 ಕಿ.ಮೀ ಉದ್ದದವರೆಗೆ ನಾಲೆ ಆಧುನೀಕರಣ ಮಾಡಿದ್ದೇವೆ. ಇನ್ನೂ 340 ಕೋಟಿ ರೂ. ವೆಚ್ಚದಲ್ಲಿ 450 ಕಿ.ಮೀ ಉದ್ದದ ನಾಲೆ ಆಧುನೀಕರಣವನ್ನು ಮಾಡಲಾಗುತ್ತಿದೆ. ಉಳಿದ 1375 ಕಿ.ಮೀ ಉದ್ದದ ನಾಲೆಯ ಆಧುನೀಕರಣವನ್ನು 500-600 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಒಂದೂವರೆ ಅಥವಾ ಎರಡು ವರ್ಷದೊಳಗೆ ಪೂರ್ಣಗೊಳಿಸಿ ರೈತರಿಗೆ ಸಮರ್ಪಕವಾಗಿ ನೀರು ತಲುಪುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಎಂ.ಬಿ.ಪಾಟೀಲ್, ಅಂಬರೀಶ್, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪೂಗೌಡ, ತಾ.ಪಂ. ಅಧ್ಯಕ್ಷೆ ಶೈಲಜಾಗೋವಿಂದರಾಜು, ಗ್ರಾ.ಪಂ ಅಧ್ಯಕ್ಷೆ ಶಾಂತಮ್ಮ ಇತರರು ಉಪಸ್ಥಿತರಿದ್ದರು.