ಬಂಟ್ವಾಳ: ಪಾಣೆಮಂಗಳೂರು ಸೇತುವೆ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಇನ್ನೂ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ನಿರ್ಲಕ್ಷ್ಯ ತೋರಿದ ತಹಶೀಲ್ದಾರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಗುರುವಾರ ನಡೆಯಿತು.
ಬಂಟ್ವಾಳ ತಾಲೂಕಿನಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಸಾಧಿಸಲಾದ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕುರಿತಾಗಿ ಬಂಟ್ವಾಳ ತಾಲೂಕು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ನಿಯೋಗವೊಂದು ಪಾಣೆಮಂಗಳೂರು ಸೇತುವೆ ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ದೂರು ನೀಡಿದರೂ, ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲವೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಹಾಗೆಯೇ ನಿಷೇಧಿಯ ಸ್ಥಳದಲ್ಲೂ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ರಕರ್ತರೂ ಕೂಡ ಜಿಲ್ಲಾಧಿಕಾರಿಯವರ ಗಮನ ಸೆಳೆದರು. ಇದರಿಂದ ಮತ್ತಷ್ಟು ಗರಂ ಆದ ಜಿಲ್ಲಾ ಧಿಕಾರಿ ಎ.ಬಿ ಇಬ್ರಾಹಿಂ ಅವರು, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆಯವರು ತರಾಟೆಗೆ ತೆಗೆದುಕೊಂಡು, ನೀವೂ ಕೂಡ ಈ ದಂಧೆಯಲ್ಲಿ ಶಾಮೀಲಾಗಿದ್ದಿರೇನ್ರಿ..? ಎಂದು ಪ್ರಶ್ನಿಸಿದರು. ಆಗ ತಹಶೀಲ್ದಾರ್ “ಇವತ್ತೇ ನೋಡ್ತೇನೆ ಸಾರ್..” ಅಂದಷ್ಟೇ ಹೇಳಿ ಸುಮ್ಮಗಾದರು.
ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಸಹಿತ ಜಿಲ್ಲಾಧಿಕಾರಿಯವರೇ ಕೇಳಿದ ಕಡತಗಳು ತಾಲೂಕು ಕಛೇರಿಯಲ್ಲಿ ಕಾಣೆಯಾಗಿದ್ದವು. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿಯವರು ತಾಲೂಕು ಕಛೇರಿಯ ಎಲ್ಲಾ ಶಿರಸ್ತೇದಾರರನ್ನು ಕರೆಸಿ ಕ್ಲಾಸ್ ತೆಗೆದುಕೊಂಡರು. ತಾನು ಕೇಳಿದ ಕಡತವೇ ತಮಗೆ ಸಿಗುತ್ತಿಲ್ಲ ಎಂದಾದರೇ ಜನಸಾಮಾನ್ಯರು ಬಂದು ಕೇಳಿದಾಗ ಏನು ಮಾಡ್ತೀರಿ.. ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಗುರುವಾರ ತಾನು ಮತ್ತೆ ಬಂಟ್ವಾಳಕ್ಕೆ ಕಡತ ಪರಿಶೀಲನೆಗೆ ಬರುತ್ತೇನೆ ಆಗ ಎಲ್ಲವೂ ಸರಿಯಾಗಿರಬೇಕು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಕಛೇರಿಯಿಂದ ಕೇಳಲಾದ ವಿವಿಧ ಪ್ರಕರಣಗಳ ಸುಮಾರು 41 ಕಡತಗಳ ಕುರಿತಾಗಿ ನಿರ್ಲಕ್ಷ್ಯ ವಹಿಸಿದ್ದನ್ನು ಪ್ರಶ್ನಿಸಿ, ಮಾತಿನ ಛೀಮಾರಿ ಹಾಕಿದರು.
ಹದಿನೈದು ದಿನಗಳಾದರೂ ಬಂಟ್ವಾಳ ತಾ.ಪಂ. ಹಳೆ ಕಟ್ಟಡಕ್ಕೆ ನೀರು ಪೂರೈಕೆ ಮಾಡದೇ ಇರುವ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿವರು ಸಂಜೆಯ ಒಳಗಾಗಿ ನೀರು ಪೂರೈಸಿ ಕ್ರಮ ಕೈಗೊಂಡು ತನಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು. ಇದೇ ವೇಳೆ ಕೌಟುಂಬಿಕ ಕಲಹವೊಂದಕ್ಕೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಹೋದರಿಯರಿಬ್ಬರು ಜಿಲ್ಲಾಧಿಕಾರಿಯವರಲ್ಲಿ ಅವಲತ್ತುಕೊಂಡಾಗ , ತಕ್ಷಣ ಎಎಸ್ಪಿ ರಾಹುಲ್ ಅವರನ್ನು ಸಂಪರ್ಕಿಸಿ, ಈ ಪ್ರಕರಣಕ್ಕೆ ಪರಿಹಾರ ಒದಗಿಸುವಂತೆ ತಿಳಿಸಿದರು. ಜಮೀನು ಫ್ಲಾಟಿಂಗ್ ಗೆ ಸಂಬಂಧಿಸಿ ಭೂಶಾಖೆಯಲ್ಲಿ ಒಂದೇ ಕಂಪ್ಯೂಟರ್ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸುಜಿತ್ ಎಂಬವರು ದೂರಿಕೊಂಡರೆ, ನರಿಕೊಂಬಿನಲ್ಲಿ ಪರಂಬೋಕು ಕೆರೆಗೆ ಮಣ್ಣು ಹಾಕಿ ತೊಂದರೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಎಲ್ಲರಿಗೂ ದೂರಿತ್ತರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಮಾಧವ ಕರ್ಬೆಟ್ಟು ಜಿಲ್ಲಾಧಿಕಾರಿಯವರ ಗಮನಸೆಳೆದರು.
ಬಳಿಕ ಮಿನಿಧಾನ ಸೌಧದ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಗುತ್ತಿಗೆದಾರರಿಂದ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಪಡೆದರು.