ಮಂಗಳೂರು: ಬೈಕ್ ಗಳೆರಡರ ನಡುವೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿ ಧರ್ಮಗುರುಗಳಿಗೆ ಹಲ್ಲೆ ನಡೆಸಿದ್ದನ್ನು ತಡೆಯಲು ಬಂದ ಇಬ್ಬರಿಗೆ ತಂಡವೊಂದು ಚೂರಿ ಇರಿದು ಹಲ್ಲೆ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇನ್ನೊಂದು ತಂಡ ಮನೆಯೊಂದರ ಸೊತ್ತುಗಳನ್ನು ಧ್ವಂಸಗೈದು, ವಾಹನಗಳನ್ನು ಪುಡಿಗೈದು ಗಲಭೆ ನಡೆಸಿದ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ವೀರನಗರ ಸಮೀಪದ ಫೈಸಲ್ ನಗರದಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಫೈಸಲ್ ನಗರ ಸಮೀಪದ ಮಸೀದಿಯೊಂದರ ಧರ್ಮಗುರುಗಳಾದ ಫಾರುಕ್ ದಾರಿಮಿ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ವೀರನಗರದ ರೈಲ್ವೇ ಅಂಡರ್ ಪಾಸ್ ಸಮೀಪ ಅಪರಿಚಿತರ ಬೈಕಿಗೆ ತಾಗಿತ್ತು. ಈ ನಡುವೆ ಧರ್ಮಗುರು ಮತ್ತು ಅಪರಿಚಿತನ ಜತೆ ವಾಗ್ವಾದ ನಡೆಯುತಿತ್ತು. ಇದೇ ಸಂದರ್ಭ ಆ ಮೂಲಕ ಸ್ಕಾರ್ಪಿಯೋ ವಾಹನದಲ್ಲಿ ತೆರಳುತ್ತಿದ್ದ ತಂಡವೊಂದು ಹೊರಗಿಳಿದು ದಾರಿಮಿಯವರು ಕಾಲರನ್ನು ಹಿಡಿದು ಥಳಿಸಲು ಮುಂದಾಗಿತ್ತು. ಇದನ್ನು ಅದೇ ಮಾರ್ಗವಾಗಿ ಬೈಕಿನಲ್ಲಿ ತೆರಳುತ್ತಿದ್ದ ಸರ್ಫುದ್ದೀನ್ ಮತ್ತು ನಗರದ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಸ್ಥ ಸಿರಾಜುದ್ದೀನ್ ಎಂಬವರು ಪ್ರಶ್ನಿಸಿದ್ದರು. ಈ ವೇಳೆ ಫಾರುಕ್ ದಾರಿಮಿಯವರನ್ನು ತೆರಳುವಂತೆ ಹೇಳಿದ ತಂಡ ಸಿರಾಜುದ್ಧೀನ್ ಅವರನ್ನು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹೊಟ್ಟೆ ಭಾಗಕ್ಕೆ ತಿವಿಯಲು ಮುಂದಾದಾಗ ಅವರು ತಪ್ಪಿಸಿದ ಪರಿಣಾಮ ಮರ್ಮಾಂಗದ ಬಳಿಗೆ ಚುಚ್ಚಿದ್ದಾರೆ. ಇದನ್ನು ತಡೆಯಲು ಮುಂದಾದ ಫಯಾಝ್ ಅವರ ಬೆನ್ನಿನ ಭಾಗಕ್ಕೆ ಥಳಿಸಿ ಬಳಿಕ ಪರಾರಿಯಾಗಿದ್ದಾರೆನ್ನಲಾಗಿದೆ. ಗಾಯಾಳುಗಳಿಬ್ಬರನ್ನು ಫಳ್ನೀರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಟ್ಸಾಪ್ ನಲ್ಲಿ ಧರ್ಮಗುರು ಮತ್ತು ಸಿರಾಜುದ್ದೀನ್ ಅವರಿಗೆ ಹಲ್ಲೆ ನಡೆದಿರುವ ವಿಚಾರ ಹರಿದಾಡುತ್ತಿದ್ದಂತೆ ಫೈಸಲ್ ನಗರದಲ್ಲಿ ತಂಡವೊಂದು ಹಲ್ಲೆ ನಡೆಸಿದ್ದಾರೆನ್ನಲಾದ ಅಪ್ಪು ಯಾನೆ ಪ್ರಜ್ವಲ್ ಎಂಬವರ ಮನೆಗೆ ನುಗ್ಗಿ ದಾಂಧಲೆ ನಡೆಸಿ ಸೊತ್ತುಗಳನ್ನು ಧ್ವಂಸಗೊಳಿಸಿದೆ. ಮನೆ ಕಿಟಕಿ ಗಾಜುಗಳನ್ನು ಪುಡಿಗೈದಿದ್ದು, ಈ ವೇಳೆ ಮನೆಯೊಳಗೆ ಮಲಗಿದ್ದ 90ರ ಹರೆಯದ ಅಜ್ಜಿಗೆ ಗಾಯವಾಗಿದೆ. ಬಳಿಕ ಮನೆಯಲ್ಲಿದ್ದ ಮಹಿಳೆಯರ ಎದುರಿನಲ್ಲೇ ಕುರ್ಚಿ, ಸೋಫಾ, ಅಡುಗೆ ಮನೆಯಲ್ಲಿದ್ದ ಸಾಮಗ್ರಿಗಳನ್ನು , ವಿದ್ಯುತ್ ಉಪಕರಣಗಳೆಲ್ಲವನ್ನೂ ಹಾನಿಗೊಳಿಸಿದೆ. ಬಳಿಕ ಹೊರಗಡೆ ನಿಲ್ಲಿಸಲಾಗಿದ ನೆರೆಮನೆಯ ಆಲ್ಟೋ ಕಾರಿಗೆ ಕಲ್ಲು ಹಾಕಿ ಗಾಜುಗಳನ್ನು ಪುಡಿಗೈದಿದೆ. ಬಳಿಕ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಸಿಲ್ವಿಯಾ ಎಂಬವರ ಮನೆಗೆ ಹೋದ ತಂಡ ದೀಕ್ಷಿತ್ ಅವರ ಬೈಕಿಗೆ ತಲವಾರಿನಿಂದ ಹೊಡೆದಿದ್ದು, ಸಮೀಪದಲ್ಲಿ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರನ್ನು ಪುಡಿಗೈದಿದೆ. ಅಷಾಗುತ್ತಿದ್ದಂತೆ ಜನ ಜಮಾಯಿಸಲು ಆರಂಭವಾಗುತ್ತಿದ್ದಂತೆ ಕಲ್ಲು ತೂರಾಟಗಳು ನಡೆದಿದೆ. ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು ಉದ್ರಿಕ್ತರನ್ನು ಚದುರಿಸಿ, ಹೆಚ್ಚಿನ ಕೆಎಸ್ ಆರ್ ಪಿ ತುಕಡಿಗಳನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ತಡರಾತ್ರಿ ಇಡೀ ಬಂದೋಬಸ್ತ್ ಮುಂದುವರಿದಿತ್ತು.
ನಾವೆಲ್ರೂ ಒಟ್ಟಿಗೇ ಇರ್ತಿದ್ದೆವು. ಒಬ್ರ ಕಷ್ಟದಲ್ಲಿ ಇನ್ನೊಬ್ರು ಸಹಾಯ ಮಾಡ್ತಾ ಜತೆಯಾಗಿ ಸೌಹಾರ್ದತೆಯಿಂದ ಬಾಳ್ತಿದ್ದೆವು. ಆದ್ರೆ ಘಟನೆ ನಡೆದ ಸ್ಥಳದಲ್ಲಿ ನನ್ ಪರಿಚಯದ ಮನೋಜಣ್ಣ ಇದ್ರಿಂದ ಅಲ್ಲೇ ನಿಲ್ಸಿ, ಏನಾಯ್ತು ಎಂದಷ್ಟೇ ಕೇಳಿದ್ದೆ. ಆದ್ರೆ ಅವ್ರೂ ಹಲ್ಲೆಕೋರರ ಪರ ನಿಂತು ನನ್ನ ಮೇಲೆ ದಾಳಿ ನಡೆಸಿದ್ದು ತುಂಬಾ ಬೇಜಾರಾಗಿದೆ. ಹಲ್ಲೆಗಿಂತ ಸ್ನೇಹದ ವಿಶ್ವಾಸಕ್ಕೆ ಧಕ್ಕೆ ತಂದಿರುವುದು ಮನಸ್ಸಿಗೆ ತುಂಬಾ ನೋವಾಗಿದೆ. ಚೂರಿ ಹಾಕಿದ್ದು ಸಾಗರ್, ಹಿಂದೆ ಕೊಲೆ ಪ್ರಕರಣದಲ್ಲಿ ಆತ ಗುರುತಿಸಿಕೊಂಡಿದ್ದ. ಹಲ್ಲೆ ನಡೆಸಿದ ಅಪ್ಪು ಪೂಜಾರಿ ಯಾನೆ ಪ್ರಜ್ವಲ್, ಸತೀಶ್, ಗಣೇಶ್ ಎಲ್ರೂ ಪರಿಚಯದವ್ರೇ. ಈ ಪೈಕಿ ಅಪ್ಪು ನನ್ನ ಕ್ಲಾಸ್ ಮೇಟ್ ಕೂಡಾ ಎಂದು ಗಾಯಾಳು ಸಿರಾಜುದ್ದೀನ್ ಹೇಳಿದ್ದಾರೆ.