ಕಾಸರಗೋಡು: ಆಂಧ್ರಪ್ರದೇಶದ ತೆಲಂಗಾಣ ಸಮೀಪದ ಕರ್ನೂಲ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಸುಳೆ ಸೇರಿದಂತೆ ಆರು ಮಂದಿ ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ನಡೆದಿದ್ದು, ಈ ಪೈಕಿ ಐವರು ಕಾಸರಗೋಡು ನಿವಾಸಿಗಳಾಗಿದ್ದಾರೆ.
ಮೃತಪಟ್ಟವರನ್ನು ದೇಲ೦ಪಾಡಿ ಊಜಂಪಾಡಿಯ ದೇವಸ್ಯ ( 65), ಪತ್ನಿ ತ್ರೆಸ್ಯಮ್ಮ( 62) , ಪುತ್ರ ರಾಬಿನ್ಸ್ ( 38) , ಪತ್ನಿ ಬಿಸ್ಮೋಲ್ ( 29) , ಇವರ ನಾಲ್ಕು ತಿಂಗಳ ಮಗು ಹಾಗೂ ಕಾರು ಚಾಲಕ ಆಂಧ್ರಪ್ರದೇಶದ ಪವನ್ ಎಂದು ಗುರುತಿಸಲಾಗಿದೆ. ಕೊಟ್ಟಾಯಂ ನಿಂದ ತೆಲಂಗಾಣಕ್ಕೆ ತೆರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಕಾರು ರಸ್ತೆ ಬದಿಯ ಮೋರಿಯ ಗೋಡೆಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.
ರಾಬಿನ್ಸ್ ಹದಿನೈದು ವರ್ಷಗಳಿಂದ ಆಂಧ್ರದ ಮೆಹಬೂಬ ನಗರದಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದು, ಒಂದೂವರೆ ವರ್ಷದ ಹಿಂದೆ ಕೊಟ್ಟಾಯಂ ನಿವಾಸಿನಿಯಾಗಿರುವ ಬಿಸ್ಮೋಲ್ ರನ್ನು ವಿವಾಹವಾಗಿದ್ದರು. ಇವರ ಮಗುವಿಗೆ ಪವಿತ್ರ ಸ್ನಾನ ನೀಡುವ ಕಾರ್ಯ ಆದಿತ್ಯವಾರ ನಡೆದಿದ್ದು, ಈ ಕಾರ್ಯಕ್ರಮ ನಡೆದು ರಾತ್ರಿ ಆಂಧ್ರಕ್ಕೆ ಕುಟುಂಬ ಸಹಿತ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಳೆದ ಐದು ವರ್ಷಗಳಿಂದ ದೇಲಂಪಾಡಿಯಲ್ಲಿರುವ ಮನೆ ತೊರೆದು ಕುಟುಂಬವು ಆಂಧ್ರ ಪ್ರದೇಶದಲ್ಲೇ ವಾಸಿಸುತ್ತಿದೆ. 30 ವರ್ಷಗಳ ಹಿಂದೆ ದೇವಸ್ಯ -ತ್ರೆಷ್ಯಮ್ಮ ದಂಪತಿ ಕಣ್ಣೂರಿನಿಂದ ದೇಲಂಪಾಡಿಯ ಊಜಂಪಾಡಿಗೆ ತಲುಪಿ ಇಲ್ಲಿ ರಬ್ಬರ್ ಕೃಷಿ ನಡೆಸುತ್ತಿದ್ದರು. ರಾಬಿನ್ಸ್ ನ ಮಗುವಿನ ಪವಿತ್ರ ಸ್ನಾನ ಕಾರ್ಯಕ್ರಮಕ್ಕೆಂದು ದೇವಸ್ಯ ಮತ್ತು ತ್ರೆಷ್ಯಮ್ಮ ಕೊಟ್ಟಾಯಂಗೆ ತೆರಳಿದ್ದು, ಅಲ್ಲಿಂದ ರಾಬಿನ್ಸನ್ ಕೆಲಸ ನಿರ್ವಹಿಸುತ್ತಿರುವ ಆಂಧ್ರಪ್ರದೇಶದ ಮೆಹಬೂಬ್ ನಗರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ರಾಬಿನ್ಸ್ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ಕೇರಳ ಟೆಕ್ನೋ ಹೈಸ್ಕೂಲ್ ಎಂಬ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದರು.
ಅಪಘಾತದ ಸುದ್ದಿ ತಿಳಿದು ರಾಬಿನ್ಸ್ ನ ಸಹೋದರ ಆಂಧ್ರಪ್ರದೇಶಕ್ಕೆ ಹೊರಟಿದ್ದಾರೆ. ದೇಲಂಪಾಡಿ ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತದೇಹಗಳನ್ನು ಮೆಹಬೂಬ್ ನಗರದ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಊರಿಗೆ ತರುವ ಸಿದ್ದತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.